ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರವಾಗಿ ಪದೇ ಪದೇ ಭಾರತದ ವಿರುದ್ಧ ಕಾಲುಕೆರೆದು ಬರುತ್ತಿರುವ ಕೆನಡಾ ಸರ್ಕಾರದ ವಿರುದ್ಧ ಭಾರತ ತೀವ್ರ ಕಿಡಿಕಾರಿದ್ದು, ಕೆನಡಾ ಸರ್ಕಾರದ ವರದಿಯನ್ನು 'ಹಾಸ್ಯಾಸ್ಪದ' ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಭಾರತ ಮತ್ತು ಕೆನಡಾ ನಡುವೆ ನಿರಂತರವಾಗಿ ಹದಗೆಡುತ್ತಿರುವ ಸಂಬಂಧಗಳ ಮಧ್ಯೆ, ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಕೊಲ್ಲುವ ಸಂಚಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿದಿತ್ತು ಎಂಬ ಕೆನಡಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೆನಡಾದ ಗ್ಲೋಬ್ ಮತ್ತು ಮೇಲ್ ಪತ್ರಿಕೆಯ ವರದಿಯು ಹೆಸರಿಸದ ಕೆನಡಾದ ಅಧಿಕಾರಿಗಳನ್ನು ಉಲ್ಲೇಖಿಸಿ, ಖಲಿಸ್ತಾನಿ ಕಾರ್ಯಕರ್ತನನ್ನು ಕೊಲ್ಲುವ ಸಂಚಿನ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ತಿಳಿದಿತ್ತು.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಕೂಡ ಈ ಸಂಚಿನ ಕುಣಿಕೆಯಲ್ಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಇದು "ಸ್ಮೀಯರ್ ಅಭಿಯಾನ" (ಸುಳ್ಳು ಅಥವಾ ಸಂಶಯಾಸ್ಪದ ಆರೋಪಗಳನ್ನು ಮಾಡುವ ಮೂಲಕ ಸಾರ್ವಜನಿಕ ವ್ಯಕ್ತಿಯನ್ನು ಅಪಖ್ಯಾತಿಗೊಳಿಸುವ ಯೋಜನೆ) ಎಂದು ಹೇಳಿದ್ದಾರೆ.
"ಕೆನಡಾದ ಸರ್ಕಾರದ ಮೂಲವೊಂದು ಪತ್ರಿಕೆಗೆ ನೀಡಿದ ಇಂತಹ ಹಾಸ್ಯಾಸ್ಪದ ಹೇಳಿಕೆಗಳನ್ನು ಅವರು ಅರ್ಹವಾದ ತಿರಸ್ಕಾರದಿಂದ ವಜಾಗೊಳಿಸಬೇಕು. ಈ ರೀತಿಯ ಸ್ಮೀಯರ್ ಪ್ರಚಾರಗಳು ನಮ್ಮ ಈಗಾಗಲೇ ಹದಗೆಟ್ಟಿರುವ ಸಂಬಂಧಗಳನ್ನು ಇನ್ನಷ್ಟು ಹಾನಿಗೊಳಿಸುತ್ತವೆ" ಎಂದೂ ಎಚ್ಚರಿಸಿದ್ದಾರೆ.
ಅಲ್ಲದೆ ಈಗಾಗಲೇ ಈ ಪ್ರಕರಣ ಸಂಬಂಧ ಅಮೆರಿಕ ಸೇರಿದಂತೆ ಗುಪ್ತಚರ ಪಾಲುದಾರರೊಂದಿಗೆ "ವಿಶ್ವಾಸಾರ್ಹ ಮಾಹಿತಿ" ಹಂಚಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಖಲಿಸ್ತಾನಿ ಭಯೋತ್ಪಾದಕ ಮತ್ತು ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಕಳೆದ ವರ್ಷ ಜೂನ್‌ನಲ್ಲಿ ವ್ಯಾಂಕೋವರ್‌ನಲ್ಲಿ ಕೊಲ್ಲಲಾಯಿತು, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ದೆಹಲಿಯ "ಏಜೆಂಟ್‌ಗಳು" ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಭಾರತದೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟನ್ನು ಪ್ರಾರಂಭಿಸಿದರು. ಕಳೆದ ತಿಂಗಳು ಕೆನಡಾ, ಭಾರತೀಯ ಹೈಕಮಿಷನರ್ ಸಂಜಯ್ ವರ್ಮಾ ಮತ್ತು ಇತರ ಕೆಲವು ರಾಜತಾಂತ್ರಿಕರನ್ನು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿತ್ತು.
ಅಲ್ಲದೆ ಭಾರತೀಯ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ಕೆನಡಾ ಸರ್ಕಾರ ಹೇಳಿತ್ತು. ಟಿಟ್-ಫಾರ್-ಟ್ಯಾಟ್ ನಡೆಯಲ್ಲಿ, ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತ ಸರ್ಕಾರ ಕೂಡ ಕೆನಡಾದ ಚಾರ್ಜ್ ಡಿ'ಅಫೇರ್ಸ್ ಸ್ಟೀವರ್ಟ್ ವೀಲರ್ ಮತ್ತು ಇತರ ಐದು ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿತ್ತು.
ನಿಷೇಧಿತ ಭಯೋತ್ಪಾದಕ ಸಂಘಟನೆ ಖಲಿಸ್ತಾನ್ ಟೈಗರ್ ಫೋರ್ಸ್‌ನ ಮಾಸ್ಟರ್ ಮೈಂಡ್ ನಿಜ್ಜರ್ - ಪಂಜಾಬ್‌ನಲ್ಲಿ ಹಿಂದೂ ಪುರೋಹಿತರ ಹತ್ಯೆ ಸೇರಿದಂತೆ ಬಹು ಅಪರಾಧಗಳಿಗಾಗಿ ದೆಹಲಿಯ 'ಮೋಸ್ಟ್ ವಾಂಟೆಡ್' ಭಯೋತ್ಪಾದಕರ ಪಟ್ಟಿಯಲ್ಲಿದ್ದ. ಭಯೋತ್ಪಾದನಾ ನಿಗ್ರಹ ಸಂಸ್ಥೆ ಎನ್‌ಐಎ ಆತನನ್ನು ಸೆರೆಹಿಡಿಯುವ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿತ್ತು.
Advertisement