ಬ್ರಾಂಪ್ಟನ್/ಟೊರೊಂಟೊ: ಭಾರತ ಮತ್ತು ಕೆನಡಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊಗೆ ಸಂಕಷ್ಟ ಕಡಿಮೆಯಾಗುತ್ತಿಲ್ಲ. ದಿನವೂ ಒಂದಲ್ಲ ಒಂದು ವಿಚಾರದಲ್ಲಿ ಟೀಕೆಗಳನ್ನು ಎದುರಿಸಬೇಕಾಗುತ್ತಿದೆ. ಈಗ ಒಂದು ಪ್ರಕರಣದಲ್ಲಿ, ಟ್ರೂಡೊ ಅಂತಹ ಪರಿಸ್ಥಿತಿಯನ್ನು ಎದುರಿಸಿದ್ದು ಅಲ್ಲದೆ ತಮ್ಮದೇ ಆದ ಗುಪ್ತಚರ ಸಂಸ್ಥೆ ಅಧಿಕಾರಿಗಳನ್ನು 'ಅಪರಾಧಿಗಳು' ಎಂದು ಕರೆಯುವಂತಾಗಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಪ್ರಕರಣದಲ್ಲಿ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಟ್ರೂಡೊ ತಮ್ಮದೆ ಅಧಿಕಾರಿಗಳನ್ನು ಅಪರಾಧಿಗಳು ಎಂದು ಕರೆದಿದ್ದಾರೆ. ಕೆನಡಾದ ಪ್ರಮುಖ ಪತ್ರಿಕೆ 'ಗ್ಲೋಬ್ ಅಂಡ್ ಮೇಲ್' ವರದಿಯೊಂದನ್ನು ಪ್ರಕಟಿಸಿತ್ತು. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಪ್ರಧಾನಿ ಮೋದಿಗೆ ಮೊದಲೇ ಮಾಹಿತಿ ಇತ್ತು ಎಂದು ಹೇಳಲಾಗಿತ್ತು. ಅದೇ ವರದಿಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೂ ಈ ಯೋಜನೆಯ ಅರಿವಿತ್ತು. ಕೆನಡಾದ ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ಈ ವರದಿಯನ್ನು ಪ್ರಕಟಿಸಲಾಗಿತ್ತು. ಟ್ರೂಡೊ ಈ ವಿಷಯಗಳನ್ನು ಆಧಾರರಹಿತ ಎಂದು ಕರೆದಿದ್ದಾರೆ.
ಬ್ರಾಂಪ್ಟನ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಜಸ್ಟಿನ್ ಟ್ರುಡೊ, "ದುರದೃಷ್ಟವಶಾತ್ ಆ ಅಪರಾಧಿಗಳು ಮಾಧ್ಯಮಗಳಿಗೆ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿರುವುದನ್ನು ನಾವು ನೋಡಿದ್ದೇವೆ. ಮಾಧ್ಯಮಗಳು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿವೆ. ಅಪರಾಧಿಗಳು ಮಾಧ್ಯಮಗಳಿಗೆ ಸುಳ್ಳು ಮಾಹಿತಿಯನ್ನು ಸೋರಿಕೆ ಮಾಡುತ್ತಾರೆ ಎಂದು ಹೇಳಿದರು.
ಕೆನಡಾದ ರಾಷ್ಟ್ರೀಯ ಭದ್ರತಾ ಸಂಸ್ಥೆ 'ಗ್ಲೋಬ್ ಅಂಡ್ ಮೇಲ್' ವರದಿಯನ್ನು ಸಂಪೂರ್ಣವಾಗಿ ಸುಳ್ಳು ಎಂದು ಬಣ್ಣಿಸಿದೆ. ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪಾತ್ರದ ಬಗ್ಗೆ ಯಾವುದೇ ಪುರಾವೆಗಳು ಇಲ್ಲ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
'ಗ್ಲೋಬ್ ಅಂಡ್ ಮೇಲ್' ವರದಿ ಪ್ರಕಟವಾದ ನಂತರ ಭಾರತೀಯ ವಿದೇಶಾಂಗ ಸಚಿವಾಲಯ ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿತ್ತು. ಭಾರತ ಇದನ್ನು ಮಾನಹಾನಿ ಮಾಡುವ ಅಭಿಯಾನ ಎಂದು ಕರೆದಿದೆ. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, "ಇಂತಹ ಮಾನಹಾನಿಕರ ಪ್ರಚಾರಗಳು ಈಗಾಗಲೇ ಹದಗೆಟ್ಟಿರುವ ನಮ್ಮ ಸಂಬಂಧಗಳನ್ನು ಮತ್ತಷ್ಟು ಹಾಳುಮಾಡುತ್ತವೆ" ಎಂದು ಹೇಳಿದ್ದಾರೆ.
Advertisement