ಟೆಲ್ ಅವೀವ್: ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಲೆಬನಾನ್ ಮೇಲೆ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್, ಬುಧವಾರ ತನ್ನ 8 ಯೋಧರು ಮೃತಪಟ್ಟಿರುವುದಾಗಿ ಹೇಳಿದೆ. ಇದು ಮಧ್ಯಪ್ರಾಚ್ಯ ಸಂಘರ್ಷದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಮಂಗಳವಾರ ನಡೆದ ಇರಾನ್‌ನ ಕ್ಷಿಪಣಿ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಕಳೆದ ವಾರ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರನ್ನು ಕೊಂದಿದ್ದಕ್ಕೆ ಪ್ರತಿಕ್ರಿಯೆಯಾಗಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ಹೇಳಿತ್ತು.
ಎರಡು ಪ್ರತ್ಯೇಕ ದಾಳಿಗಳಲ್ಲಿ ಏಳು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ವಿವರಿಸಿದೆ. ಇದು ತಿಂಗಳಲ್ಲಿ ಇಸ್ರೇಲಿ ಪಡೆಗಳ ವಿರುದ್ಧ ನಡೆದ ಅತ್ಯಂತ ಮಾರಣಾಂತಿಕ ದಾಳಿಗಳಲ್ಲಿ ಒಂದಾಗಿದೆ. ವೈದ್ಯ ಸೇರಿದಂತೆ ಇತರ ಏಳು ಮಂದಿ ಗಾಯಗೊಂಡಿದ್ದಾರೆ.
ಇದಕ್ಕೂ ಮುನ್ನಾ "22 ವರ್ಷದ ಕ್ಯಾಪ್ಟನ್ ಈಟಾನ್ ಇಟ್ಜಾಕ್ ಓಸ್ಟರ್ ಅವರು ಲೆಬನಾನ್‌ನಲ್ಲಿ ಯುದ್ಧದ ಸಮಯದಲ್ಲಿ ಹುತಾತ್ಮರಾಗಿದ್ದಾರೆ" ಎಂದು ಇಸ್ರೇಲ್ ಮಿಲಿಟರಿ ಪ್ರಕಟಣೆಯಲ್ಲಿ ಹೇಳಿತ್ತು.
ಲೆಬನಾನ್ ರಾಜಧಾನಿಯಲ್ಲಿ ಸೀಮಿತ ಮತ್ತು ಸ್ಥಳೀಯ ಭೂ ಆಕ್ರಮಣ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ ಬೆನ್ನಲ್ಲೇ ಮಂಗಳವಾರ ಬೆಳಗ್ಗೆ ಬೈರುತ್ನ ದಕ್ಷಿಣ ಉಪನಗರ ವ್ಯಾಪ್ತಿಯಲ್ಲಿ ಇಸ್ರೇಲ್ ಬೃಹತ್ ಪ್ರಮಾಣದ ದಾಳಿಗಳನ್ನು ಆರಂಭಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.
Advertisement