ಸಿಂಧ್ ಪ್ರಾಂತ್ಯ: ತಾನು ಮೆಚ್ಚಿದ ಹುಡುಗನೊಂದಿಗೆ ಮದುವೆ ಮಾಡಿಕೊಡಲು ಕುಟುಂಬಸ್ಥರು ಒಪ್ಪಂದ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ಊಟಕ್ಕೆ ವಿಷ ಬೆರೆಸಿದ್ದರಿಂದ 13 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಖೈರಪುರ ಸಮೀಪದ ಹೈಬತ್ ಖಾನ್ ಬ್ರೋಹಿ ಗ್ರಾಮದಲ್ಲಿ ಆಗಸ್ಟ್ 19 ರಂದು ಒಂದೇ ಕುಟುಂಬದ 13 ಮಂದಿ ಸಾವಿಗೀಡಾಗಿದ್ದರು. ಈ ಘಟನೆ ಸ್ಥಳೀಯರಲ್ಲಿ ಆಘಾತ ಉಂಟು ಮಾಡಿತ್ತು. ತನಿಖೆ ಕೈಗೊಂಡ ಪೊಲೀಸರು ಕೊನೆಗೂ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಯುವತಿಯನ್ನು ಬಂಧಿಸಿದ್ದಾರೆ.
ತಾನು ಇಷ್ಟ ಪಟ್ಟಿದ ಹುಡುಗನನ್ನು ಮದುವೆಯಾಗಲು ಮನೆಯವರು ಒಪ್ಪದ ಕಾರಣ ಕೋಪಗೊಂಡ ಯುವತಿ ಶಾಯಿಸ್ತಾ, ತನ್ನ ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿದ್ದು, ಆಕೆಯ ಪೋಷಕರು ಸೇರಿದಂತೆ ಕುಟುಂಬ ಸದಸ್ಯರಿಗೆ ವಿಷವುಣಿಸಿ ಸಾಯಿಸಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.
ಊಟ ಸೇವಿಸಿದ ನಂತರ ಅಸ್ವಸ್ಥರಾಗಿದ್ದ ಎಲ್ಲಾ 13 ಸದಸ್ಯರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಅವರೆಲ್ಲರೂ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ಮಾಡಿದಾಗ ವಿಷಪೂರಿತ ಆಹಾರದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ ಎಂದು ಖೈರ್‌ಪುರದ ಹಿರಿಯ ಪೊಲೀಸ್ ಅಧಿಕಾರಿ ಇನಾಯತ್ ಶಾ ಹೇಳಿದ್ದಾರೆ.
ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿದಾಗ ಮನೆಯಲ್ಲಿ ರೊಟ್ಟಿ ಮಾಡಲು ಬಳಸುವ ಗೋಧಿಗೆ ಮಗಳು ಮತ್ತು ಆಕೆಯ ಗೆಳೆಯ ವಿಷ ಹಾಕಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಭಾನುವಾರ ಆಕೆಯನ್ನು ಬಂಧಿಸಿದ್ದಾರೆ.
ಎಷ್ಟೇ ಪ್ರಯತ್ನಪಟ್ಟರೂ ತನ್ನ ಬಾಯ್ ಫ್ರೆಂಡ್ ಜೊತೆಗೆ ಮದುವೆ ಮಾಡಿಕೊಡಲು ಕುಟುಂಬಸ್ಥರು ಒಪ್ಪಿರಲಿಲ್ಲ. ಇದರಿಂದಾಗಿ ಆತನ ಪ್ರಿಯಕರನೊಂದಿಗೆ ಸೇರಿ ರೊಟ್ಟಿಗೆ ಬಳಸುವ ಗೋಧಿಯೊಂದಿಗೆ ವಿಷ ಬೆರೆಸಿ ಹತ್ಯೆ ಮಾಡಿರುವುದಾಗಿ ಯುವತಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಇನಾಯತ್ ಶಾ ತಿಳಿಸಿದರು.
Advertisement