
ಗಾಜಾದಲ್ಲಿ ಐಡಿಎಫ್ ಕಾರ್ಯಾಚರಣೆ ವೇಳೆ 3 ಉಗ್ರರು ಹತರಾಗಿದ್ದಾರೆ. ಮೃತ ಭಯೋತ್ಪಾದಕರಲ್ಲಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಹ ಹತನಾಗಿದ್ದಾನೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಯಾಹ್ಯಾ ಸಿನ್ವಾರ್ ಸಾವಿನ ಕುರಿತಂತೆ ಹಮಾಸ್ ಇಲ್ಲಿಯವರೆಗೂ ಏನನ್ನು ಹೇಳಿಲ್ಲ.
ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ ಕಟ್ಟಡದ ಪ್ರದೇಶದಲ್ಲಿ ಒತ್ತೆಯಾಳುಗಳು ಇಲ್ಲ. ಇಸ್ರೇಲ್ ರಕ್ಷಣಾ ಪಡೆಗಳು (IDF) ಹೇಳುವಂತೆ 'ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಡೆಗಳು ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಕಾರ್ಯಾಚರಣೆಯನ್ನು ಮುಂದುವರೆಸುತ್ತಿವೆ. ಯಾಹ್ಯಾ ಸಿನ್ವಾರ್ ಗಾಜಾದಲ್ಲಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದಾನೆಯೇ ಎಂಬುದರ ಕುರಿತು ಐಡಿಎಫ್ ತನಿಖೆ ನಡೆಸಿತ್ತು. ಇದರ ಬೆನ್ನಲ್ಲೇ IDF ಯಾಹ್ಯಾ ಸಿನ್ವಾರ್ ನನ್ನು ಹತ್ಯೆ ಮಾಡಿರುವುದಾಗಿ ಘೋಷಿಸಿದೆ.
ಇನ್ನು ಗಾಜಾದ ಆರೋಗ್ಯ ಸಚಿವಾಲಯವು ಉತ್ತರ ಗಾಜಾದ ಶಾಲೆಯೊಂದರಲ್ಲಿ ನಡೆಸಲಾಗುತ್ತಿರುವ ಆಶ್ರಯ ವಸತಿ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಐದು ಮಕ್ಕಳು ಸೇರಿದಂತೆ 28 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ಶಾಲೆಯಲ್ಲಿ ತಂಗಿದ್ದ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಉಗ್ರಗಾಮಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಸೇನೆ ತಿಳಿಸಿದೆ. ಉತ್ತರ ಗಾಜಾದ ನಗರ ನಿರಾಶ್ರಿತರ ಶಿಬಿರವಾದ ಜಬಾಲಿಯಾದಲ್ಲಿರುವ ಅಬು ಹುಸೇನ್ ಶಾಲೆಯ ಮೇಲೆ ಈ ದಾಳಿ ನಡೆದಿತ್ತು. ಅಲ್ಲಿ ಇಸ್ರೇಲ್ ಒಂದು ವಾರಕ್ಕೂ ಹೆಚ್ಚು ಕಾಲ ಪ್ರಮುಖ ವಾಯು ಮತ್ತು ನೆಲದ ಕಾರ್ಯಾಚರಣೆಯನ್ನು ನಡೆಸುತ್ತಿದೆ. 2023ರ ಅಕ್ಟೋಬರ್ 7ರಂದು ಇಸ್ರೇಲ್ ನೆಲಕ್ಕೆ ನುಗ್ಗಿ ಹಮಾಸ್ ನಡೆಸಿದ್ದ ಮಾರಣಹೋಮದ ಮಾಸ್ಟರ್ ಮೈಂಡ್ ಯಾಹ್ಯಾ ಸಿನ್ವಾರ್ ಎಂದು ಇಸ್ರೇಲ್ ಆರೋಪಿಸಿತ್ತು.
ಉತ್ತರ ಗಾಜಾದಲ್ಲಿನ ಸಚಿವಾಲಯದ ತುರ್ತು ಘಟಕದ ಮುಖ್ಯಸ್ಥ ಫಾರೆಸ್ ಅಬು ಹಮ್ಜಾ ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು. ಹತ್ತಿರದ ಕಮಲ್ ಅಡ್ವಾನ್ ಆಸ್ಪತ್ರೆಯು ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಹೆಣಗಾಡುತ್ತಿದೆ ಎಂದು ಅವರು ಹೇಳಿದರು. ಹಲವು ಮಹಿಳೆಯರು ಮತ್ತು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಹಮ್ಜಾ ತಿಳಿಸಿದ್ದಾರೆ. ಶಾಲೆಯೊಳಗೆ ಎರಡೂ ಉಗ್ರಗಾಮಿ ಗುಂಪುಗಳು ನಡೆಸುತ್ತಿದ್ದ ಕಮಾಂಡ್ ಸೆಂಟರ್ ಅನ್ನು ಗುರಿಯಾಗಿಸಿಕೊಂಡಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ದಾಳಿಯ ಸಮಯದಲ್ಲಿ ಉಪಸ್ಥಿತರಿದ್ದ ಉಗ್ರಗಾಮಿಗಳೆಂದು ವಿವರಿಸಿದ ಹತ್ತಾರು ಜನರ ಹೆಸರನ್ನು ಅದು ಪಟ್ಟಿ ಮಾಡಿದೆ.
Advertisement