
ನವದೆಹಲಿ: ಆಂತರಿಕ ಪ್ರತಿಭಟನೆ, ಸರ್ಕಾರ ಬದಲಾವಣೆಯಿಂದ ಆರ್ಥಿಕ ಕುಸಿತದಿಂದ ತತ್ತರಿಸಿ ಹೋಗಿದ್ದ ಬಾಂಗ್ಲಾದೇಶದ ನೆರವಿಗೂ ಕೊನೆಗೂ ಭಾರತ ಧಾವಿಸಿದ್ದು, ಉಭಯ ದೇಶಗಳ ನಡುವೆ ಸ್ಥಗಿತಗೊಂಡಿದ್ದ ವ್ಯಾಪಾರ-ವಹಿವಾಟು ಬುಧವಾರದಿಂದ ಪುನಾರಂಭಗೊಂಡಿದೆ.
"ಹಿಂಸಾಚಾರದಿಂದಾಗಿ 47 ದಿನಗಳ ಅನಿಶ್ಚಿತತೆಯ ನಂತರ, ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬೆನಾಪೋಲ್ ಬಂದಿರನ ಮೂಲಕ ವ್ಯಾಪಾರ ಪುನರಾರಂಭವಾಗಿದ್ದು, ಸರಬರಾಜು ಕೊರತೆ, ಹೆಚ್ಚಿನ ಹಣದುಬ್ಬರ ಮತ್ತು ಜೀವನೋಪಾಯ ನಷ್ಟದಿಂದಾಗಿ ತತ್ತರಿಸಿ ಹೋಗಿದ್ದ ಬಾಂಗ್ಲಾದೇಶದ ವ್ಯಾಪಾರಿಗಳು ಭಾರತದ ಈ ಕ್ರಮವನ್ನು ಸ್ವಾಗತಿಸಿದ್ದಾರೆ" ಎಂದು ಢಾಕಾದ ಮೂಲಗಳು ತಿಳಿಸಿವೆ.
ಬಾಂಗ್ಲಾದೇಶದೊಂದಿಗಿನ ವ್ಯಾಪಾರದ ಪುನರಾರಂಭದ ಕುರಿತು ಯಾವುದೇ ಅಧಿಕೃತ ಮಾಹಿತಿ ಭಾರತ ಸರ್ಕಾರದಿಂದ ಇನ್ನೂ ಬಂದಿಲ್ಲ. ಆದರೆ 'ಬಾಂಗ್ಲಾದೇಶವು ಹೊಸ ಸರ್ಕಾರದೊಂದಿಗೆ ಬದಲಾವಣೆಗೆ ಒಳಗಾಗುತ್ತಿದ್ದು, ಮಾಲ್ಡೀವ್ಸ್‌ನಂತೆಯೇ ಭಾರತದೊಂದಿಗಿನ ಅದರ ಸಂಬಂಧವು ಸಮಯದೊಂದಿಗೆ ಫಲಪ್ರದವಾಗಲಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಇತ್ತೀಚೆಗೆ ಹೇಳಿದ್ದರು.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ನೇತೃತ್ವದ ಯೋಜನೆಗಳು ಸದ್ಯಕ್ಕೆ ಸ್ಥಗಿತಗೊಂಡಿವೆ. ಬಾಂಗ್ಲಾದೇಶದ ಮೂಲಗಳು ಇದು ದೀರ್ಘಾವಧಿಯ ಬೆಳವಣಿಗೆಯಾಗಿರಬಹುದು ಎಂದು ಹೇಳಿದರೆ, ಸರಿಯಾದ ಸಮಯದಲ್ಲಿ ಅವು ಪುನರಾರಂಭಗೊಳ್ಳುತ್ತವೆ ಎಂಬ ಆಶಾವಾದವನ್ನು ಭಾರತ ಹೊಂದಿದೆ. ಬಾಂಗ್ಲಾದೇಶದಲ್ಲಿ ಆರ್ಥಿಕ ಹಿನ್ನಡೆ ಉಂಟಾಗಿದ್ದು, ವೇತನ ಹೆಚ್ಚಳಕ್ಕಾಗಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ಇದು ಹಲವು ಕೈಗಾರಿಕೆಗಳನ್ನು ಮುಚ್ಚಲು ಕಾರಣವಾಗಿದೆ.
ಮೂಲಗಳ ಪ್ರಕಾರ "ಸುಮಾರು 60 ಉಡುಪು ತಯಾರಿಕಾ ಘಟಕಗಳನ್ನು ಮುಚ್ಚಲಾಗಿದೆ. ಇದಲ್ಲದೆ, ರಾಜಧಾನಿ ಢಾಕಾದಲ್ಲಿ ಪ್ರತಿಭಟನೆಗಳು ಮತ್ತು ಘರ್ಷಣೆಗಳು ಮುಂದುವರೆದಿವೆ. ಇಂದು ಎರಡು ವಿಭಿನ್ನ ಕಾಲೇಜುಗಳಲ್ಲಿ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆಗಳು ನಡೆದಿದ್ದು, ಇಲ್ಲಿ 150 ಮಂದಿ ಗಾಯಗೊಂಡಿದ್ದಾರೆ. ಜಿನೀವಾ ಶಿಬಿರದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಈ ಎಲ್ಲ ಬೆಳವಣಿಗೆಗಳು ಬಾಂಗ್ಲಾದೇಶ ಸಹಜ ಸ್ಥಿತಿಗೆ ಬರಲು ಬಹಳ ದೂರದ ಹಾದಿ ಸಾಗಬೇಕಿದೆ ಎಂದು ಢಾಕಾದ ರಾಜಕೀಯ ನಿರೂಪಕ ಪ್ರೊಫೆಸರ್ ನಜ್ಮುಲ್ ಅಹ್ಸಾನ್ ಕಲೀಮುಲ್ಲಾ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
Advertisement