ಪೇಜರ್, ವಾಕಿಟಾಕಿಗಳ ಸ್ಫೋಟದ ಬೆನ್ನಲ್ಲೇ ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಹೆಜ್ಬುಲ್ಲಾ ಭದ್ರಕೋಟೆಗಳ ಮೇಲೆ ಬಾಂಬ್‌ಗಳ ಸುರಿಮಳೆ!
ಬೈರೂತ್: ಪೇಜರ್, ವಾಕಿ ಟಾಕಿ ಸ್ಫೋಟದ ನಂತರ ಹಿಜ್ಜುಲ್ಲಾ ಉಗ್ರ ಸಂಘಟನೆ ಮೇಲೆ ಇಸ್ರೇಲ್ ಇದೀಗ ನೇರ ದಾಳಿ ಶುರು ಮಾಡಿದೆ. ದಕ್ಷಿಣ ಲೆಬನಾನ್‌ನ ಹೆಜ್ಬುಲ್ಲಾ ಭದ್ರಕೋಟೆಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸುತ್ತಿದೆ. ಹೆಜ್ಬುಲ್ಲಾದ ಸಂವಹನ ವ್ಯವಸ್ಥೆ ಪೇಜರ್, ವಾಕಿ ಟಾಕಿಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ಸ್ಫೋಟಗಳಲ್ಲಿ 37 ಮಂದಿ ಹತ್ಯೆಯಾಗಿದ್ದು ಅಲ್ಲದೆ ನೂರಾರು ಮಂದಿ ಗಂಭೀರ ಗಾಯಗೊಂಡಿದ್ದರು.
ಹೆಜ್ಬುಲ್ಲಾದ ಸಂವಹನ ವ್ಯವಸ್ಥೆಗಳ ಮೇಲಿನ ದಾಳಿಗಳ ಮೂಲಕ ಉಗ್ರಗಾಮಿ ಗುಂಪಿನ ಮೇಲೆ ಇಸ್ರೇಲ್ ಒತ್ತಡ ಹೇರಿತು. ಅಲ್ಲದೆ ಇದೀಗ ಲೆಬನಾನ್ ನಲ್ಲಿನ ಹೆಜ್ಬುಲ್ಲಾ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಬಾಂಬ್ ದಾಳಿ ನಡೆಸುತ್ತಿದೆ.
ಸೂಪರ್ಮಾರ್ಕೆಟ್‌ಗಳಲ್ಲಿ, ಬೀದಿಗಳಲ್ಲಿ ಮತ್ತು ಅಂತ್ಯಕ್ರಿಯೆಗಳಲ್ಲಿ ಹೆಜ್ಬುಲ್ಲಾ ಕಾರ್ಯಕರ್ತರ ಪೇಜರ್‌ಗಳು ಮತ್ತು ವಾಕಿ-ಟಾಕಿಗಳು ಸ್ಫೋಟಗೊಂಡ ಬಗ್ಗೆ ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇರಾನ್ ಬೆಂಬಲಿತ ಸಂಘಟನೆ ಮೇಲೆ ಇಸ್ರೇಲ್ ಅಭೂತಪೂರ್ವ ದಾಳಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದೆ.
ಲೆಬನಾನ್‌ನ ಆರೋಗ್ಯ ಸಚಿವರ ಪ್ರಕಾರ, ಪೇಜರ್‌ಗಳು ಮತ್ತು ವಾಕಿ-ಟಾಕಿಗಳನ್ನು ಒಳಗೊಂಡ ಸಾಧನದ ಸ್ಫೋಟಗಳು ಎರಡು ದಿನದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 37 ಮಂದಿ ಮೃತಪಟ್ಟಿದ್ದು 2,900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಯುದ್ಧದ ಹೊಸ ಹಂತ ಆರಂಭವನ್ನು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಸೇನಾ ಪಡೆಗಳೊಂದಿಗೆ ಮಾತನಾಡುತ್ತಾ, ಇಸ್ರೇಲ್ ಸೇನೆ ಹಾಗೂ ಭದ್ರತಾ ಏಜೆನ್ಸಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಎಲೆಕ್ಟ್ರಾನಿಕ್ ಉಪಕರಣಗಳ ಸ್ಫೋಟ ಪ್ರಕರಣಗಳನ್ನು ಎಲ್ಲಿಯೂ ಉಲ್ಲೇಖಿಸಿಲ್ಲವಾದರೂ, ಫಲಿತಾಂಶಗಳು ಬಹಳ ಪ್ರಭಾವಶಾಲಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

