ಟೋಕಿಯೋ: ನೂರಕ್ಕೂ ಅಧಿಕ ಬಾರಿ ಕರೆ ಮಾಡಿದ ಪತಿಯನ್ನೇ ಪತ್ನಿಯೊಬ್ಬಳು ಜೈಲಿಗಟ್ಟಿರುವ ವಿಲಕ್ಷಣ ಘಟನೆ ಜಪಾನ್ ನಲ್ಲಿ ನಡೆದಿದೆ.
ಹೌದು.. ಸಂಗಾತಿಯನ್ನು ನಿರ್ಲಕ್ಷಿಸುವುದು ತಪ್ಪು, ಏಕೆಂದರೆ ಅದು ಸಂಬಂಧದಲ್ಲಿ ವಿವಿಧ ಸಮಸ್ಯೆಗಳನ್ನು ಉಂಟುಮಾಡಬಹುದು. ಅಂತೆಯೇ ಸಂಗಾತಿ ಕುರಿತ ಅತಿಯಾದ ಕಾಳಜಿಯು ಸಹ ಸಮಸ್ಯೆಯಾಗಬಹುದು.
ವಿಶೇಷವಾಗಿ ಆ ಕಾಳಜಿಯು ಒಂದು ನಿರ್ದಿಷ್ಟ ಗಡಿ ದಾಟಿದರೆ, ಅದು ಸಂಪೂರ್ಣ ವಿಭಿನ್ನ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.
ಜಪಾನ್ ನಲ್ಲಿ ಓರ್ವ ವ್ಯಕ್ತಿ ಪತ್ನಿ ಕುರಿತು ಅತಿಯಾದ ಕಾಳಜಿ ತೋರಿದ್ದಕ್ಕೇ ಇದೀಗ ಜೈಲು ಪಾಲಾಗಿದ್ದಾನೆ. ಜಪಾನ್ ನ ಅಮಗಸಾಕಿ ನಗರದ ನಿವಾಸಿ 38 ವರ್ಷದ ಪತಿ ತನ್ನ 31 ವರ್ಷದ ಪತ್ನಿಗೆ ಪದೇ ಪದೇ ಕರೆ ಮಾಡಿ ಇದೀಗ ಜೈಲು ಹಕ್ಕಿಯಾಗಿದ್ದಾನೆ. ಮಹಿಳೆ ಹೇಳಿಕೊಂಡಿರುವಂತೆ ಆತ ತನ್ನ ಹೆಂಡತಿಗೆ ದಿನಕ್ಕೆ 100ಕ್ಕೂ ಅಧಿಕ ಬಾರಿ ಕರೆ ಮಾಡಿದ್ದಾನೆ.
ಅಷ್ಟೇ ಅಲ್ಲ, ಮಹಿಳೆ ಕರೆ ಸ್ವೀಕರಿಸದಿದ್ದಾಗ, ಈತ ತನ್ನ ಪತ್ನಿಗೆ ಅಪರಿಚಿತ ಸಂಖ್ಯೆಗಳಿಂದ ಕರೆ ಮಾಡಲಾರಂಭಿಸಿದ್ದಾನೆ. ಆರಂಭದಲ್ಲಿ ಮಹಿಳೆ ಕರೆ ಸ್ವೀಕರಿಸಿದ್ದಾಳೆ. ಆದರೆ ಆತ್ತ ಈತ ಮಾತ್ರ ಏನೂ ಮಾತನಾಡದೇ ಕರೆ ಕಟ್ ಮಾಡಿದ್ದಾನೆ.
ಬಳಿಕ ಮತ್ತೆ ಕರೆ ಮಾಡಿದ್ದಾನೆ. ಇಡೀ ದಿನ ಇದೇ ರೀತಿ ಮಾಡಿದ್ದಾನೆ. ಆರಂಭದಲ್ಲಿ ಇದು ಯಾರು ಎಂದು ಮಹಿಳೆಗೆ ತಿಳಿಯಲಿಲ್ಲ. ಹೀಗಾಗಿ ಕೊಂಚ ಭಯ ಮತ್ತು ಸಿಟ್ಟಾಗಿದ್ದಳು. ಪತಿ ಮನೆಯಿಂದ ಹೊರ ಹೋಗುತ್ತಲೇ ಆಕೆಗೆ ಕರೆಗಳ ಸುರಿಮಳೆಯೇ ಬರುತ್ತಿತ್ತು.
ಆದರೆ ಪತಿ ಮನೆಯಲ್ಲಿದ್ದಾಗ ಆಕೆಗೆ ಒಂದೂ ಕರೆ ಬರುತ್ತಿರಲಿಲ್ಲ. ಗಂಡ ಮನೆಯಲ್ಲಿ ವಿಡಿಯೋ ಗೇಮ್ ಆಡುವಾಗ ಕರೆಗಳು ಬರುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಪತ್ನಿ ಈತನ ಮೇಲೆ ಅನುಮಾನಪಟ್ಟಿದ್ದಾಳೆ. ಆದರೂ ಒಂದಷ್ಟು ದಿನ ಸಾವರಿಸಿಕೊಂಡಿದ್ದಾಳೆ.
ಆದರೆ ಮತ್ತದೇ ಕರೆಗಳ ಸುರಿಮಳೆಯಿಂದ ಆಕ್ರೋಶಗೊಂಡ ಮಹಿಳೆ ಕೊನೆಗೂ ಪೊಲೀಸರಿಗೆ ದೂರು ನೀಡಿದ್ದಾಳೆ. ಅಲ್ಲದೆ ತನ್ನ ಗಂಡನ ಮೇಲೆ ತನಗಿರುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಂಪೂರ್ಣ ತನಿಖೆ ನಡೆಸಿದ ಪೊಲೀಸರು ಆ ಕರೆಗಳ ಹಿಂದೆ ಇರುವುದು ಆಕೆಯ ಪತಿಯೇ ಎಂದು ಪತ್ತೆ ಮಾಡಿದ್ದಾರೆ.
ಅಲ್ಲದೆ ಸೆಪ್ಟೆಂಬರ್ 4 ರಂದು ಜಪಾನ್ ಕಾನೂನಿನ ಅನ್ವಯ ಆತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ತನ್ನ ಹೆಂಡತಿಯನ್ನು ತಾನು ಅತೀವ ಪ್ರೀತಿಸುತ್ತಿದ್ದು, ಇದೇ ಕಾರಣಕ್ಕೆ ಆಕೆಗೆ ಪದೇ ಪದೇ ಕರೆ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ. ಆತನ ಉತ್ತರ ಕೇಳಿ ಅಧಿಕಾರಿಗಳೇ ಅಚ್ಚರಿಗೊಂಡಿದ್ದು, ಇಂತಹ ಪ್ರಕರಣ ಇದೇ ಮೊದಲು ಎಂದು ಹೇಳಿದ್ದಾರೆ.
Advertisement