
ಬೈರುತ್: ಲೆಬನಾನ್‌ನ ರಾಜಧಾನಿ ಬೈರುತ್‌ನಲ್ಲಿರುವ ಹೆಜ್ಬುಲ್ಲಾದ ಭದ್ರಕೋಟೆಯ ಮೇಲೆ ಶುಕ್ರವಾರ ಇಸ್ರೇಲ್ ದಾಳಿ ನಡೆಸಿದ್ದು, ದಾಳಿಯಲ್ಲಿ ಉಗ್ರ ಸಂಘಟನೆಯ ಉನ್ನತ ಮಿಲಿಟರಿ ನಾಯಕ ಸೇರಿದಂತೆ 12 ಜನ ಸಾವನ್ನಪ್ಪಿದ್ದಾರೆ ಮತ್ತು ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಸ್ರೇಲಿ ಮಿಲಿಟರಿಯು ತಾನು ಈ "ಉದ್ದೇಶಿತ ದಾಳಿ" ನಡೆಸಿರುವುದಾಗಿ ಹೇಳಿದೆ. ಆದರೆ ಲೆಬನಾನಿನ ಆರೋಗ್ಯ ಸಚಿವಾಲಯವು ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು 59 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ದಕ್ಷಿಣ ಬೈರುತ್‌ನಲ್ಲಿ ಉಗ್ರಗಾಮಿ ಸಂಘಟನೆಯ ಭದ್ರಕೋಟೆಯ ಮೇಲೆ ನಡೆದ ದಾಳಿಯಲ್ಲಿ ಹೆಜ್ಬುಲ್ಲಾದ ರಾಡ್ವಾನ್ ಘಟಕದ ಮುಖ್ಯಸ್ಥ ಇಬ್ರಾಹಿಂ ಅಖಿಲ್ ಮೃತಪಟ್ಟಿದ್ದಾರೆ ಎಂದು ಹೆಜ್ಬುಲ್ಲಾದ ನಿಕಟ ಮೂಲಗಳು ತಿಳಿಸಿವೆ.
ಹೆಜ್ಬುಲ್ಲಾ ಅಧಿಕೃತವಾಗಿ ಇಬ್ರಾಹಿಂ ಅಖಿಲ್ ಅವರ ಸಾವನ್ನು ದೃಢೀಕರಿಸಿಲ್ಲ. ಆದರೆ ದಾಳಿಯ ನಂತರ ತಾನು ಇಸ್ರೇಲಿ ಗುಪ್ತಚರ ನೆಲೆಯನ್ನು ಧ್ವಂಸಗೊಳಿಸಿರುವುದಾಗಿ ಹೇಳಿದೆ.
ಅಕ್ಟೋಬರ್ 7 ರಂದು ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭದ ನಂತರ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ನಡೆದ ಮೂರನೇ ವೈಮಾನಿಕ ದಾಳಿ ಇದಾಗಿದೆ. ಲೆಬನಾನ್‌ನ ಹೆಜ್ಬುಲ್ಲಾ ಉಗ್ರ ಸಂಘಟನೆ ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ ಬೆದರಿಕೆ ಹಾಕಿದ ಬೆನ್ನಲ್ಲೇ ಇಸ್ರೇಲ್ ಸೇನೆ ತನ್ನ ವಾಯು ದಾಳಿ ಆರಂಭ ಮಾಡಿದೆ.
Advertisement