ನ್ಯೂಯಾರ್ಕ್: ಜಗತ್ತಿಗೆ AI ಅಂದ್ರೆ ಕೃತಕ ಬುದ್ಧಿಮತ್ತೆ. ಆದರೆ, ನನಗೆ AI ಎಂದರೆ ಅಮೆರಿಕನ್-ಇಂಡಿಯನ್ ಸ್ಪಿರಿಟ್. ಇದು ವಿಶ್ವದ ಹೊಸ 'AI' ಶಕ್ತಿ...." ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
ಇಂದು ನ್ಯೂಯಾರ್ಕ್ ನ ನಸ್ಸೌ ವೆಟರನ್ಸ್ ಮೆಮೋರಿಯಲ್ ಕೊಲಿಜಿಯಂನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ಈಗ ಅವಕಾಶಗಳ ನಾಡಾಗಿದೆ. ಭಾರತ ಇನ್ನು ಮುಂದೆ ಅವಕಾಶಗಳಿಗಾಗಿ ಕಾಯುವುದಿಲ್ಲ. ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.
"ಇಲ್ಲಿಯೂ ಈಗ ಚುನಾವಣೆ ನಡೆಯುತ್ತಿದೆ. ಭಾರತದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳು ಇತಿಹಾಸದಲ್ಲಿ ಇದುವರೆಗೆ ನಡೆದ ಅತಿದೊಡ್ಡ ಚುನಾವಣೆಗಳಾಗಿವೆ. ಅಮೆರಿಕದ ಒಟ್ಟು ಜನಸಂಖ್ಯೆಗಿಂತ ನಾವು ಸುಮಾರು ಎರಡು ಪಟ್ಟು ಹೆಚ್ಚಿದ್ದೇವೆ. ಈ ಪ್ರಮಾಣದ ಭಾರತೀಯ ಪ್ರಜಾಪ್ರಭುತ್ವವನ್ನು ನೋಡಿದಾಗ ನಾವು ಇನ್ನಷ್ಟು ಹೆಮ್ಮೆಪಡುತ್ತೇವೆ ಎಂದರು.
ನಿನ್ನೆ, ಅಧ್ಯಕ್ಷ ಬೈಡೆನ್ ಅವರು ನನ್ನನ್ನು ಡೆಲವೇರ್‌ನಲ್ಲಿರುವ ಅವರ ಮನೆಗೆ ಆಹ್ವಾನಿಸಿದ್ದರು. ಅವರ ಪ್ರೀತಿಯ ಆತಿಥ್ಯದಿಂದ ನನ್ನ ಹೃದಯ ತುಂಬಿ ಬಂದಿತು. ಇದು 140 ಕೋಟಿ ಭಾರತೀಯರಿಗೆ ಸಿಕ್ಕ ಗೌರವ, ಈ ಗೌರವವು ನಿಮ್ಮದು ಮತ್ತು ಇಲ್ಲಿ ವಾಸಿಸುವ ಲಕ್ಷಾಂತರ ಭಾರತೀಯರದ್ದು ಎಂದು ಪ್ರಧಾನಿ ಮೋದಿ ಹೇಳಿದರು.
ನೀವು ಭಾರತವನ್ನು ಅಮೆರಿಕಕ್ಕೆ ಮತ್ತು ಅಮೆರಿಕವನ್ನು ಭಾರತಕ್ಕೆ ಸಂಪರ್ಕಿಸಿದ್ದೀರಿ. ನಿಮ್ಮ ಕೌಶಲ್ಯ, ಪ್ರತಿಭೆ ಮತ್ತು ಬದ್ಧತೆಗೆ ಯಾವುದೇ ಸ್ಪರ್ಧೆಯಿಲ್ಲ. ನೀವು ಏಳು ಸಮುದ್ರಗಳನ್ನು ದಾಟಿ ಬಂದಿರಬಹುದು. ಆದರೆ ಯಾವುದೇ ಸಮುದ್ರವು ನಿಮ್ಮನ್ನು ಭಾರತದಿಂದ ದೂರವಿರಿಸುವಷ್ಟು ಆಳವಾಗಿಲ್ಲ. ಭಾರತ ನಮಗೆ ಕಲಿಸಿದುದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
Advertisement