ಜೆರುಸಲೇಂ: ಹಿಜ್ಬುಲ್ಲಾ ಉಗ್ರಗಾಮಿ ಪಡೆಯ ವಿರುದ್ಧ ಹೋರಾಡುತ್ತಿರುವ ಇಸ್ರೇಲ್ ಸೋಮವಾರ ಮತ್ತೆ ವೈಮಾನಿಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 356 ಮಂದಿ ಸಾವನ್ನಪ್ಪಿದ್ದಾರೆ ಮತ್ತು 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಪ್ರಕಟಣೆಯಲ್ಲಿ ತಿಳಿಸಿದೆ. 2006 ರ ಇಸ್ರೇಲ್-ಹೆಜ್ಬುಲ್ಲಾ ಯುದ್ಧದ ನಂತರದ ಅತ್ಯಂತ ಭೀಕರವಾದ ದಾಳಿ ಇದಾಗಿದೆ.
ನಾವು ಲೆಬನಾನ್‌ನಲ್ಲಿ ನಮ್ಮ ದಾಳಿಯನ್ನು ತೀವ್ರಗೊಳಿಸುತ್ತಿದ್ದೇವೆ. ಉತ್ತರದ ನಿವಾಸಿಗಳನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ಹಿಂದಿರುಗಿಸುವ ನಮ್ಮ ಗುರಿಯನ್ನು ಸಾಧಿಸುವವರೆಗೆ ಈ ಕ್ರಮಗಳು ಮುಂದುವರಿಯುತ್ತವೆ. ಇಂದು 300 ಟಾರ್ಗೆಟ್ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
ಅಕ್ಟೋಬರ್‌ನಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಲೆಬನಾನ್ ಮೇಲೆ ನಡೆದ ಅತ್ಯಂತ ಮಾರಣಾಂತಿಕ ದಾಳಿ ಇದಾಗಿದ್ದು, ದಾಳಿಯಲ್ಲಿ 21 ಮಕ್ಕಳು ಸೇರಿದಂತೆ 274 ಜನರು ಸಾವನ್ನಪ್ಪಿದ್ದಾರೆ ಮತ್ತು 5000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿದೆ.
"ಬೆಳಗ್ಗೆಯಿಂದ ದಕ್ಷಿಣದ ಪಟ್ಟಣಗಳು ಮತ್ತು ಹಳ್ಳಿಗಳ ಮೇಲೆ ಇಸ್ರೇಲಿ ಶತ್ರುಗಳು ನಡೆಸಿದ ದಾಳಿಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 356 ಜನರ ಸಾವನ್ನಪ್ಪಿದ್ದಾರೆ ಮತ್ತು 1000 ಇತರರು ಗಾಯಗೊಂಡಿದ್ದಾರೆ" ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಸಾವಿರಾರು ಲೆಬನೀಸ್‌ಗಳು ದಕ್ಷಿಣದಿಂದ ಪಲಾಯನ ಮಾಡಿದರು. ಇದರಿಂದಾಗಿ ಬೈರುತ್‌ನತ್ತ ಸಾಗುವ ಮಾರ್ಗದಲ್ಲಿ ದಕ್ಷಿಣದ ಬಂದರು ನಗರವಾದ ಸಿಡಾನ್‌ನ ಮುಖ್ಯ ಹೆದ್ದಾರಿಯು ಕಾರುಗಳಿಂದ ಜಾಮ್ ಆಗಿತ್ತು.
ಕಳೆದ ಅಕ್ಟೋಬರ್‌ನಿಂದ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸುಮಾರು 600 ಜನ ಮತಪಟ್ಟಿದ್ದಾರೆ. ಕಳೆದ ಶನಿವಾರ ಲೆಬನಾನ್‌ನ ರಾಜಧಾನಿ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ಕಮಾಂಡರ್ ಸೇರಿದಂತೆ ಕನಿಷ್ಠ 31 ಜನ ಸಾವನ್ನಪ್ಪಿದ್ದರು.
ದೇಶಾದ್ಯಂತ ಮಂಗಳವಾರ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ಸರ್ಕಾರ ಆದೇಶಿಸಿದೆ ಮತ್ತು ದಕ್ಷಿಣದಿಂದ ಸ್ಥಳಾಂತರಗೊಂಡ ಜನರಿಗೆ ಆಶ್ರಯವನ್ನು ಒದಗಿಸಲು ಸಿದ್ಧತೆಗಳನ್ನು ಪ್ರಾರಂಭಿಸಿತು.
Advertisement