ಲೆಬನಾನ್ ನಲ್ಲಿ ಕದನ ವಿರಾಮ ಘೋಷಿಸುವ ಅಮೇರಿಕಾ ಪ್ರಸ್ತಾವನೆ, ಸಲಹೆಗಳನ್ನು ಇಸ್ರೇಲ್ ತಿರಸ್ಕರಿಸಿದ್ದು ಹಿಜ್ಬುಲ್ಲಾ ಉಗ್ರ ಸಂಘಟನೆ ವಿರುದ್ಧ ಜಯ ಗಳಿಸುವವರೆಗೂ ಹೋರಾಡುವ ಶಪಥ ಮಾಡಿದೆ.
ಲೆಬನಾನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರಾನ್ ಬೆಂಬಲಿತ ಹೆಜ್ಬೊಲ್ಲಾ ಭದ್ರಕೋಟೆಗಳ ಮೇಲೆ ಇಸ್ರೇಲಿ ಬಾಂಬ್ ದಾಳಿ ಈ ವಾರ ನೂರಾರು ಜನರನ್ನು ಕೊಂದಿದೆ. ಆದರೆ ಉಗ್ರಗಾಮಿ ಗುಂಪು ರಾಕೆಟ್ ಬ್ಯಾರೇಜ್ ಗಳಿಂದ ಪ್ರತೀಕಾರಕ್ಕೆ ಮುಂದಾಗಿದೆ.
"ಉತ್ತರದಲ್ಲಿ ಯಾವುದೇ ಕದನ ವಿರಾಮ ಇರುವುದಿಲ್ಲ. ವಿಜಯದವರೆಗೆ ಮತ್ತು ಉತ್ತರದ ನಿವಾಸಿಗಳು ತಮ್ಮ ಮನೆಗಳಿಗೆ ಸುರಕ್ಷಿತವಾಗಿ ಹಿಂದಿರುಗುವವರೆಗೆ ನಾವು ನಮ್ಮೆಲ್ಲ ಶಕ್ತಿಯೊಂದಿಗೆ ಹಿಜ್ಬುಲ್ಲಾ ಭಯೋತ್ಪಾದಕ ಸಂಘಟನೆಯ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತೇವೆ" ಎಂದು ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಈ ಹಿಂದೆ ಹೇಳಿಕೆಯನ್ನು ನೀಡಿದ್ದು, ಅವರು ಕದನ ವಿರಾಮದ ಪ್ರಸ್ತಾಪಕ್ಕೆ "ಪ್ರತಿಕ್ರಿಯಿಸಿಲ್ಲ" ಮತ್ತು "ಸಂಪೂರ್ಣ ಬಲದೊಂದಿಗೆ ಹೋರಾಟವನ್ನು ಮುಂದುವರಿಸಲು" ಅವರು ಮಿಲಿಟರಿಗೆ ಆದೇಶಿಸಿದ್ದಾರೆ ಎಂದು ವಿದೇಶಾಂಗ ಸಚಿವ ಹೇಳಿದ್ದಾರೆ.
ಅಧ್ಯಕ್ಷ ಜೋ ಬಿಡನ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನ್ಯೂಯಾರ್ಕ್‌ನಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿಯ ಸಮಾರಂಭದ ನಂತರ ಭೇಟಿ ಮಾಡಿದ್ದು, ಈ ಬೆನ್ನಲ್ಲೇ ಅಮೇರಿಕಾ, ಫ್ರಾನ್ಸ್ ಮತ್ತು ಇತರ ಮಿತ್ರರಾಷ್ಟ್ರಗಳು 21 ದಿನಗಳ ಕದನ ವಿರಾಮಕ್ಕೆ ಕರೆ ನೀಡಿವೆ.
ಲೆಬನಾನ್‌ನಲ್ಲಿನ ಪರಿಸ್ಥಿತಿಯು "ಅಸಹನೀಯ" ಮತ್ತು ಇಸ್ರೇಲ್ ಜನರ ಅಥವಾ ಲೆಬನಾನ್ ಜನರ ಹಿತಾಸಕ್ತಿಯಲ್ಲಿ ಇಲ್ಲ ಎಂದು ಅಮೇರಿಕಾ, ಫ್ರಾನ್ಸ್ ಅಧ್ಯಕ್ಷರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ರಾಜತಾಂತ್ರಿಕ ಪ್ರಯತ್ನಗಳ ಹೊರತಾಗಿಯೂ, ಹಿಂಸಾಚಾರ ಹೆಚ್ಚಾಗುತ್ತಿದೆ.
ಪೂರ್ವ ಬೆಕಾ ಕಣಿವೆ ಮತ್ತು ದಕ್ಷಿಣ ಲೆಬನಾನ್, ಹಿಜ್ಬುಲ್ಲಾ ಭದ್ರಕೋಟೆಗಳಲ್ಲಿ ಸುಮಾರು 75 ಗುರಿಗಳನ್ನು ಧ್ವಂಸ ಮಾಡಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಈ ದಾಳಿಗಳ ಪರಿಣಾಮವಾಗಿ, ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಜನರು ತಮ್ಮ ಮನೆಗಳಿಂದ ಪಲಾಯನ ಮಾಡಿದ್ದಾರೆ.
Advertisement