ಹೈಜಾಕ್ ಆಗಿದ್ದ ಹಡಗಿನ ರಕ್ಷಣೆ
ಹೈಜಾಕ್ ಆಗಿದ್ದ ಹಡಗಿನ ರಕ್ಷಣೆ

48 ಗಂಟೆಗಳಲ್ಲೇ ಸೊಮಾಲಿಯಾ ಕಡಲ್ಗಳ್ಳರ ಮಟ್ಟ ಹಾಕಿದ ಭಾರತೀಯ ನೌಕಾ ಪಡೆ! ಹೈಜಾಕ್ ಆಗಿದ್ದ ಹಡಗಿನ ರಕ್ಷಣೆ, ಸಿಬ್ಬಂದಿ ಸುರಕ್ಷಿತ

ಸೊಮಾಲಿಯಾ ಕಡಲ್ಗಳ್ಳರಿಂದ ಹೈಜಾಕ್ ಆಗಿದ್ದ ಹಡಗನ್ನು ಭಾರತೀಯ ನೌಕಾಪಡೆ ತುರ್ತು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದು, ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ನವದೆಹಲಿ: ಸೊಮಾಲಿಯಾ ಕಡಲ್ಗಳ್ಳರಿಂದ ಹೈಜಾಕ್ ಆಗಿದ್ದ ಹಡಗನ್ನು ಭಾರತೀಯ ನೌಕಾಪಡೆ ತುರ್ತು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದು, ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಭಾರತೀಯ ನೌಕಾ ಪಡೆ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದು, 'ಅರಬ್ಬಿ ಸಮುದ್ರದಲ್ಲಿ ಸೋಮಾಲಿಯಾ ಕಡಲ ತೀರದ ಬಳಿ ಹೈಜಾಕ್ ಆಗಿದ್ದ ಸರಕು ಸಾಗಣೆ ಹಡಗನ್ನು ಭಾರತೀಯ ನೌಕಾ ಪಡೆಯ ಕಮಾಂಡೋಗಳು ಕಡಲ್ಗಳ್ಳರಿಂದ ಮುಕ್ತಗೊಳಿಸಿದ್ದಾರೆ. ಈ ಹಡಗಿನಲ್ಲಿ ಇದ್ದ 15 ಭಾರತೀಯರೂ ಸೇರಿದಂತೆ ಎಲ್ಲ ಸಿಬ್ಬಂದಿ ಬಂಧ ಮುಕ್ತವಾಗಿದ್ದಾರೆ' ಎಂದು ಹೇಳಿದೆ.

ಎಂ. ವಿ. ಲಿಲಾ ನೋರ್‌ಫೋಲ್ಕ್‌ ಎಂಬ ಹಡಗನ್ನು ಗುರುವಾರ ತಡ ರಾತ್ರಿ ಸೋಮಾಲಿಯಾದ ಕಡಲ್ಗಳ್ಳರು ಹೈಜಾಕ್ ಮಾಡಿದ್ದರು. ಈ ಹಡಗಿನಲ್ಲಿ ಇದ್ದ 15 ಭಾರತೀಯ ಪ್ರಜೆಗಳೂ ಸೇರಿದಂತೆ ಎಲ್ಲ ಸಿಬ್ಬಂದಿಯನ್ನೂ ಸೋಮಾಲಿಯಾದ ಕಡಲ್ಗಳ್ಳರು ಒತ್ತೆ ಇರಿಸಿಕೊಂಡಿದ್ದರು. ಹಡಗು ಹೈಜಾಕ್ ಆಗಿರುವ ಕುರಿತಾಗಿ ಬ್ರಿಟನ್‌ನ ಸರಕು ಸಾಗಣೆ ಹಡಗುಗಳ ಸಂಘಟನೆಗೆ ವೆಬ್‌ಸೈಟ್ ಪೋರ್ಟಲ್ ಮೂಲಕ ಸಂದೇಶ ರವಾನಿಸಲಾಗಿತ್ತು.  ಈ ಸುದ್ದಿ ತಿಳಿಯುತ್ತಿದ್ದಂತೆಯೇ ರಕ್ಷಣಾ ಕಾರ್ಯಾಚರಣೆಗೆ ಇಳಿದ ಭಾರತೀಯ ಸೇನೆ ಗುರುವಾರ ರಾತ್ರಿಯೇ ಅಖಾಡಕ್ಕೆ ಧುಮುಕಿತು. 

ರಕ್ಷಣೆಗೆ 4 ನೌಕೆಗಳ ರವಾನೆ
ಭಾರತೀಯ ನೌಕಾ ಪಡೆ ಈ ರಕ್ಷಣಾ ಕಾರ್ಯಾಚರಣೆಗೆ ನೌಕಾಪಡೆಯ ಒಟ್ಟು 4 ಯುದ್ಧ ನೌಕೆಗಳನ್ನು ನಿಯೋಜಿಸಿತ್ತು. ಮೊದಲಿಗೆ ನೌಕಾ ಪಡೆಯ ಯುದ್ಧ ವಿಮಾನಗಳನ್ನು ಹಡಗಿನತ್ತ ರವಾನಿಸಿತ್ತು. ಈ ವಿಮಾನವು ಹೈಜಾಕ್ ಆದ ಹಡಗಿನ ಸ್ಥಿತಿಗತಿ ಹಾಗೂ ಸೋಮಾಲಿಯಾ ದೇಶದ ಕಡಲ್ಗಳ್ಳರ ಬಳಿ ಇರಬಹುದಾದ ಶಸ್ತ್ರಾಸ್ತ್ರಗಳ ಕುರಿತಾಗಿ ಹೆಚ್ಚುವರಿ ಮಾಹಿತಿ ಸಂಗ್ರಹಿಸಿತ್ತು. ಬಳಿಕ ಅಪಹರಣಕ್ಕೀಡಾದ ಹಡಗಿನ ಬಳಿ ಯುದ್ದ ನೌಕೆಯನ್ನೂ ರವಾನಿಸಲಾಗಿತ್ತು. ಈ ನೌಕೆಯ ನೆರವಿನಿಂದ ಕಡಲ್ಗಳ್ಳರು ಹಾಗೂ ಹಡಗಿನ ಸಿಬ್ಬಂದಿ ಜೊತೆ ಸಂಪರ್ಕ ಸಾಧಿಸಲಾಯ್ತು. ಈ ನಡುವೆ ಐಎನ್‌ಎಸ್ ಚೆನ್ನೈ ಯುದ್ಧ ನೌಕೆ ಕೂಡಾ ರಕ್ಷಣ ಕಾರ್ಯಾಚರಣೆಗೆ ಹಡಗಿನ ಬಳಿ ಧಾವಿಸಿತ್ತು.

ಸೇನೆ ಇಳಿಯುತ್ತಿದ್ದಂತೆಯೇ ಹಡಗಿನಿಂದ ಕಾಲ್ಕಿತ್ತಿದ್ದ ಕಡಲ್ಗಳ್ಳರು
ಶುಕ್ರವಾರ ಬೆಳಗಿನ ವೇಳೆಗೆ ಹೈಜಾಕ್ ಆದ ಹಡಗಿಗೆ ಧುಮುಕಿದ ನೌಕಾ ಪಡೆ ಕಮಾಂಡೊಗಳು, ಹಡಗಿನ ಡೆಕ್ ಸೇರಿದಂತೆ ಸಂಪೂರ್ಣವಾಗಿ ಎಲ್ಲಡೆ ಪರಿಶೀಲನೆ ನಡೆಸಿ ಕಡಲ್ಗಳ್ಳರಿಂದ ಹಡಗನ್ನು ಮುಕ್ತಗೊಳಿಸಿತು. ಸೇನೆ ಧಾವಿಸುತ್ತಿದ್ದಂತೆಯೇ ಕಡಲ್ಗಳ್ಳರು ಹಡಗನ್ನು ಬಿಟ್ಟು ಪರಾರಿಯಾಗಿದ್ದರು. ಭಾರತೀಯ ನೌಕಾ ಪಡೆಯ ಪ್ರಧಾನ ಕಚೇರಿಯಲ್ಲಿ ಉನ್ನತಾಧಿಕಾರಿಗಳು ಈ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿಕೊಂಡು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಇದೀಗ ಕಮಾಂಡೋ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಸರಕು ಸಾಗಣೆ ಹಡಗು ಕಡಲ್ಗಳ್ಳರಿಂದ ಮುಕ್ತವಾಗಿದೆ. ಜೊತೆಯಲ್ಲೇ 15 ಭಾರತೀಯರೂ ಸೇರಿದಂತೆ ಹಡಗಿನ ಎಲ್ಲಾ ಸಿಬ್ಬಂದಿಯನ್ನೂ ರಕ್ಷಿಸಲಾಗಿದೆ.

ಅರಬ್ಬೀ ಸಮುದ್ರದಲ್ಲಿ ತೀವ್ರ ಕಟ್ಟೆಚ್ಚರ, ಮುಂಜಾಗ್ರತೆ
ಸೋಮಾಲಿಯಾದ ಕಡಲ್ಗಳ್ಳರು ಸರಕು ಸಾಗಣೆ ಹಡಗನ್ನು ವಶಕ್ಕೆ ಪಡೆದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ನೌಕಾ ಪಡೆ, ಅರಬ್ಬಿ ಸಮುದ್ರದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತಾಗಿ ಸಮಗ್ರ ಆದೇಶ ಹೊರಡಿಸಿದೆ. ಭಾರತೀಯ ನೌಕಾ ಪಡೆಯ ಮುಖ್ಯಸ್ಥರಾದ ಅಡ್ಮಿರಲ್ ಆರ್. ಹರಿ ಕುಮಾರ್ ಅವರು ಈ ಕುರಿತಾಗಿ ನಿರ್ದೇಶನ ನೀಡಿದ್ದು, ಅರಬ್ಬಿ ಸಮುದ್ರದಾದ್ಯಂತ ಯುದ್ಧ ನೌಕೆಗಳು ಗಸ್ತು ತಿರುಗಿ ಸೋಮಾಲಿಯಾದ ಕಡಲ್ಗಳ್ಳರ ಸಂಭಾವ್ಯ ದಾಳಿಯನ್ನು ತಡೆಯಬೇಕು ಎಂದು ಆದೇಶಿಸಿದ್ದಾರೆ.

ಈ ಕಾರ್ಯಾಚರಣೆಗೆ ಭಾರತೀಯ ನೌಕಾ ಪಡೆ ನಾಲ್ಕು ಯುದ್ಧ ನೌಕೆಗಳನ್ನು ನಿಯೋಜಿಸಲು ತೀರ್ಮಾನ ಮಾಡಿದೆ. ಈ ಪ್ರಾಂತ್ಯದಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ನಡೆಯಬಹುದಾದ ಸಂಭಾವ್ಯ ದಾಳಿಯ ವಿರುದ್ದ ಹೋರಾಡಲು ಈ ಯುದ್ಧ ನೌಕೆಗಳನ್ನು ನಿಯೋಜನೆ ಮಾಡಲಾಗಿದೆ.

Related Stories

No stories found.

Advertisement

X

Advertisement

X
Kannada Prabha
www.kannadaprabha.com