
ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಸುಂಕಗಳು ಬುಧವಾರ ಮಧ್ಯರಾತ್ರಿಯಿಂದ ಸಂಪೂರ್ಣವಾಗಿ ಜಾರಿಗೆ ಬಂದಿದೆ.
ಏಪ್ರಿಲ್ 2 ರಂದು ಡೊನಾಲ್ಡ್ ಟ್ರಂಪ್ ಅವರು ಇತ್ತೀಚಿನ ಸುತ್ತಿನ ಸುಂಕಗಳನ್ನು ಘೋಷಿಸಿದಾಗ, ಅಮೆರಿಕದ ಬಹುತೇಕ ಎಲ್ಲಾ ವ್ಯಾಪಾರ ಪಾಲುದಾರರ ಮೇಲೆ ಕನಿಷ್ಠ ಶೇಕಡಾ 10 ರಷ್ಟು ತೆರಿಗೆ ವಿಧಿಸುತ್ತದೆ ಮತ್ತು ಅಮೆರಿಕದೊಂದಿಗೆ ಹೆಚ್ಚುವರಿ ವ್ಯಾಪಾರ ಹೊಂದಿರುವ ದೇಶಗಳಿಗೆ ಹೆಚ್ಚಿನ ದರಗಳನ್ನು ವಿಧಿಸುತ್ತದೆ ಎಂದು ಘೋಷಿಸಿದರು.
ಶೇ. 10 ರಷ್ಟು ಮೂಲ ದರವು ಕಳೆದ ಶನಿವಾರ ಜಾರಿಗೆ ಬಂದಿದೆ. 12ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳ ಮೇಲಿನ ಟ್ರಂಪ್ ಅವರ ಹೆಚ್ಚಿನ ಆಮದು ತೆರಿಗೆ ದರಗಳು ಇಂದು ಮಧ್ಯರಾತ್ರಿಯಿಂದ ಜಾರಿಗೆ ಬಂದವು.
ಆಫ್ರಿಕನ್ ಸಾಮ್ರಾಜ್ಯವಾದ ಲೆಸೊಥೊ ಸೇರಿದಂತೆ ಅಮೆರಿಕದೊಂದಿಗೆ ಕಡಿಮೆ ವ್ಯಾಪಾರ ಮಾಡುವ ಸಣ್ಣ ಆರ್ಥಿಕತೆಗಳ ಮೇಲೆ ಹೆಚ್ಚಿನ ಸುಂಕಗಳು ಶೇಕಡಾ 50 ರಷ್ಟು ಹೆಚ್ಚಾಗಿರುತ್ತವೆ.
ಇತರ ಕೆಲವು ದರಗಳಲ್ಲಿ ಮಡಗಾಸ್ಕರ್‌ನಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ. 47, ವಿಯೆಟ್ನಾಂ ಮೇಲೆ ಶೇ. 46, ತೈವಾನ್ ಮೇಲೆ ಶೇ. 32, ದಕ್ಷಿಣ ಕೊರಿಯಾ ಮೇಲೆ ಶೇ. 25, ಜಪಾನ್ ಮೇಲೆ ಶೇ. 24 ಮತ್ತು ಯುರೋಪಿಯನ್ ಒಕ್ಕೂಟದ ಮೇಲೆ ಶೇ. 20 ತೆರಿಗೆ ಸೇರಿವೆ. ಈ ಹೊಸ ಸುಂಕಗಳಲ್ಲಿ ಕೆಲವು ಹಿಂದಿನ ವ್ಯಾಪಾರ ಕ್ರಮಗಳ ಮೇಲೆ ಅವಲಂಬಿತವಾಗಿವೆ.
ಟ್ರಂಪ್ ಕಳೆದ ವಾರ ಚೀನಾದ ಮೇಲೆ ಶೇ. 34 ಸುಂಕವನ್ನು ಘೋಷಿಸಿದರು, ಚೀನಾ ಇತ್ತೀಚೆಗೆ ಪ್ರತಿಸುಂಕ ಘೋಷಿಸಿದ ಮೇಲೆ ಚೀನಾದ ಸರಕುಗಳ ಮೇಲೆ ಇನ್ನೂ ಶೇ. 50 ಸುಂಕವನ್ನು ಸೇರಿಸುವುದಾಗಿ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಅಂದರೆ ಚೀನಾದ ಸರಕುಗಳ ಮೇಲೆ ಒಟ್ಟು ಸುಂಕವನ್ನು ಶೇ. 104 ಕ್ಕೆ ಏರಿಕೆ ಮಾಡುತ್ತದೆ.
Advertisement