
ನವದೆಹಲಿ: ಅಮೆರಿಕದಿಂದ ಗಡಿಪಾರಾಗಿ ಭಾರತಕ್ಕೆ ಬಂದಿರುವ 26/11 ಮುಂಬೈ ದಾಳಿ ರೂವಾರಿ ತಹವ್ವೂರ್ ಹುಸೇನ್ ರಾಣಾ ಪಾಕಿಸ್ತಾನಿ ಪ್ರಜೆಯಲ್ಲ.. ಆತ ಕೆನಡಾ ಪ್ರಜೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.
ನೂರಾರು ಮಂದಿಯ ಸಾವಿಗೆ ಕಾರಣವಾದ 26/11 ಮುಂಬೈ ದಾಳಿ ಪ್ರಕರಣದ ಪ್ರಮುಖ ರೂವಾರಿಯಾಗಿರುವ ಆರೋಪಿ ತಹವ್ವೂರ್ ರಾಣಾ ಪಾಕಿಸ್ತಾನ ಮೂಲದವನೇ ಆಗಿದ್ದರೂ ಆತ ಕೆನಡಾ ಪ್ರಜೆ ಎಂದು ಹೇಳುವ ಮೂಲಕ ಪ್ರಕರಣದಿಂದ ಪಾಕಿಸ್ತಾನ ಅಂತರ ಕಾಯ್ದುಕೊಂಡಿದೆ.
ಭಾರತದ ಮೇಲೆ ನಡೆದ ಅತ್ಯಂತ ಭಯಾನಕ ಭಯೋತ್ಪಾದಕ ದಾಳಿಗಳಲ್ಲಿ ಒಂದಾದ ಮುಂಬೈ ದಾಳಿ ಪ್ರಕರಣದ ಪ್ರಮುಖ ಆರೋಪಿ ತಹವ್ವೂರ್ ರಾಣಾನನ್ನು ಅಮೆರಿಕ ಭಾರತಕ್ಕೆ ಗಡಿಪಾರು ಮಾಡಿದೆ. ಇದೇ ವಿಚಾರವಾಗಿ ಮೊದಲ ಬಾರಿಗೆ ಪಾಕಿಸ್ತಾನ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ನೀಡಿದೆ.
ತಹವ್ವೂರ್ ರಾಣಾ ಪಾಕಿಸ್ತಾನದವನಲ್ಲ.. ಆತ ಕೆನಡಾ ಪ್ರಜೆಯಾಗಿದ್ದಾನೆ. ಆತನಿಗೆ ಕೆನಡಾ ಪೌರತ್ವ ಇದೆ. ಕಳೆದ ಎರಡು ದಶಕಗಳಿಂದ ತಹವ್ವೂರ್ ರಾಣಾ ತನ್ನ ಪಾಕಿಸ್ತಾನಿ ದಾಖಲೆಗಳನ್ನು ನವೀಕರಿಸಿಲ್ಲ. ಹೀಗಾಗಿ ಆತ ಪಾಕಿಸ್ತಾನದ ಪ್ರಜೆಯಲ್ಲ.. ಕೆನಡಾದ ಪ್ರಜೆಯಾಗಿದ್ದಾನೆ ಎಂದು ಹೇಳಿದೆ.
ರಾಣಾ ಪಾಕಿಸ್ತಾನದವನು.. ಮುಂಬೈ ದಾಳಿಗೆ ಪಾಕಿಸ್ತಾನವೇ ನೇರ ಹೊಣೆ
ಇನ್ನು ಅತ್ತ ಪಾಕಿಸ್ತಾನ ವಿದೇಶಾಂಗ ಇಲಾಖೆ ತಹವ್ವೂರ್ ರಾಣಾ ಪಾಕಿಸ್ತಾನದವನಲ್ಲ ಎಂದು ಹೇಳುತ್ತಿದ್ದರೂ ಇತ್ತ ಪ್ರಕರಣದ ತನಿಖೆ ನಡೆಸುತ್ತಿರುವ ಭಾರತೀಯ ಅಧಿಕಾರಿಗಳು ಮಾತ್ರ ತಹವ್ವೂರ್ ರಾಣಾ ಪಾಕಿಸ್ತಾನದವನೇ.. ಮುಂಬೈ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ನೇರ ಕೈವಾಡವಿದೆ.
ಅಕ್ಟೋಬರ್ 2009 ರಲ್ಲಿ ಮತ್ತೊಂದು ಸಂಚುಕೋರ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ಸೇರಿ ತಹವ್ವೂರ್ ರಾಣಾ ಭೀಕರ ಉಗ್ರ ದಾಳಿ ನಡೆಸಿದ್ದ ಎಂದು ಆರೋಪಿಸಿದೆ. ಅಲ್ಲದೆ ಮುಂಬೈ ದಾಳಿ ಪ್ರಕರಣ ಪ್ರಮುಖ ರೂವಾರಿ ಈತನೇ ಆಗಿದ್ದು, ಈತ ಪಾಕಿಸ್ತಾನದ ಸೇನೆ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೆ ಸಂಪರ್ಕಹೊಂದಿದ್ದ. ಹೀಗಾಗಿ 26/11 ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ನೇರ ಕೈವಾಡವಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಸಿಕ್ಕಿ ಬೀಳುವ ಭೀತಿ
ಇನ್ನು ಅಮೆರಿಕದಿಂದ ಗಡಿಪಾರಾಗಿ ಭಾರತಕ್ಕೆ ಬಂದಿರುವ ಉಗ್ರ ದಾಳಿ ರೂವಾರಿ ತಹವ್ವೂರ್ ರಾಣಾನನ್ನು ಭಾರತೀಯ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ವಿಚಾರಣೆ ವೇಳೆ ಆತ ಪಾಕಿಸ್ತಾನದ ಕೈವಾಡದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ತಹವ್ವೂರ್ ರಾಣಾನಿಂದ ಪಾಕಿಸ್ತಾನ ಅಂತರಕಾಯ್ದುಕೊಳ್ಳುತ್ತಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನಿ-ಕೆನಡಾದ ವೈದ್ಯ ತಹವೂರ್ ರಾಣಾ ಚಿಕಾಗೋದಲ್ಲಿ ಟ್ರಾವೆಲ್ ಏಜೆನ್ಸಿಯನ್ನು ಹೊಂದಿದ್ದ. ಇದೇ ಸಂಸ್ಥೆಯನ್ನು ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾದ ಡೇವಿಡ್ ಕೋಲ್ಮನ್ ಹೆಡ್ಲಿ ದಾಳಿಗೆ ಮೊದಲು ಭಾರತ ಪ್ರಯಾಣಕ್ಕಾಗಿ ಬಳಸಿಕೊಂಡಿದ್ದ ಎಂದು ಹೇಳಲಾಗಿದೆ.
Advertisement