
ವಾಷಿಂಗ್ಟನ್: ಏಪ್ರಿಲ್ 22ರಂದು ಜಮ್ಮುವಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ಸಂಘರ್ಷದ ಉಲ್ಬಣವನ್ನು ನಾನೇ ಮಧ್ಯಸ್ಥಿಕೆ ವಹಿಸಿ ನಿಲ್ಲಿಸಿದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಹೇಳಿಕೊಂಡಿದ್ದಾರೆ.
ಇದೀಗ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ, ಕಳೆದ ಐದು ತಿಂಗಳಲ್ಲಿ ಐದು ಯುದ್ಧಗಳನ್ನು ನಿಲ್ಲಿಸಿದ್ದೇನೆ, ಇದರಲ್ಲಿ ಎರಡು ರಾಷ್ಟ್ರಗಳ ನಡುವಿನ ಒಂದು ಯುದ್ಧವೂ ಸೇರಿದೆ ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವನ್ನು ಸ್ಥಾಪಿಸಲು ಅಮೆರಿಕ ಸಹಾಯ ಮಾಡಿದೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಛರಿಸಿದ ಕೇವಲ 20 ದಿನಗಳಲ್ಲಿ ಟ್ರಂಪ್ ಈ ಹೇಳಿಕೆ ಮತ್ತೆ ಹೇಳಿದ್ದಾರೆ.
2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕುರಿತು ಚರ್ಚಿಸಲು ಶ್ವೇತಭವನದಲ್ಲಿ ನಿನ್ನೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ. ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ತಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಇದನ್ನು ಅವರು "ಬೈಡನ್ ಯುದ್ಧ" ಎಂದು ಕರೆಯುತ್ತಾರೆ.
ಇದು ಬೈಡನ್ ಯುದ್ಧ, ಇದರಿಂದ ಹೊರಬರಲು ತುಂಬಾ ಶ್ರಮಿಸುತ್ತಿದ್ದೇವೆ. ಕಳೆದ ಐದು ತಿಂಗಳಲ್ಲಿ ನಾನು ಐದು ಯುದ್ಧಗಳನ್ನು ನಿಲ್ಲಿಸಿದೆ, ಮತ್ತು ಇದು ಆರನೇಯದ್ದಾಗಿರಬೇಕೆಂದು ನಾನು ಬಯಸುತ್ತೇನೆ, ಎಂದು ಅವರು ಹೇಳಿದರು. ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ರಾಷ್ಟ್ರಗಳ ನಡುವಿನ ಸಂಘರ್ಷಗಳನ್ನು ಯಶಸ್ವಿಯಾಗಿ ತಡೆಗಟ್ಟಿರುವುದಾಗಿ ಹೇಳಿದ್ದಾರೆ.
ಕಳೆದ ತಿಂಗಳು ಜುಲೈನಲ್ಲಿ, ಟ್ರಂಪ್ ಅವರು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರೊಂದಿಗಿನ ಭೇಟಿಯ ಸಮಯದಲ್ಲಿ ಇದೇ ಹೇಳಿಕೆಗಳನ್ನು ನೀಡಿದ್ದರು.ನಾವು ಯುದ್ಧಗಳನ್ನು ಇತ್ಯರ್ಥಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ, ಭಾರತ, ಪಾಕಿಸ್ತಾನ... ವಾರದೊಳಗೆ ಪರಮಾಣು ಯುದ್ಧವಾಗುವುದನ್ನು ತಡೆದಿದ್ದೇನೆ ಎಂದು ಟ್ರಂಪ್ ಹೇಳಿದರು.
Advertisement