
ಬ್ರಾಂಪ್ಟನ್: ಕೆರೆಯಲ್ಲಿ ಸೋಪ್ ಬಳಸಿ ಸ್ನಾನ ಮಾಡುತ್ತಿದ್ದ ಪ್ರವಾಸಿಗರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಸರೋವರದಲ್ಲಿ ಜನರ ಗುಂಪೊಂದು ಸೋಪಿನಿಂದ ಸ್ನಾನ ಮಾಡುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ವೀಡಿಯೊದಲ್ಲಿ, ಎರಡು ಜೋಡಿಗಳು ನೀರಿನಲ್ಲಿ ಸೋಪ್ ಮತ್ತು ಶಾಂಪೂ ಬಳಸಿ ಸ್ನಾನ ಮಾಡುತ್ತಿರುವುದು ದಾಖಲಾಗಿದೆ.
ಅಂತೆಯೇ ಈ ವಿಡಿಯೋದಲ್ಲಿ ಸ್ನಾನ ಮಾಡುತ್ತಿರುವವರು ಭಾರತೀಯರು ಎಂದೂ ಆರೋಪಿಸಲಾಗಿದೆ.
ಸಮುದ್ರ ಜೀವಿಗಳಿಗೆ ಹಾನಿ
ಗುಂಪು ಕೆರೆಯಲ್ಲಿ ಸ್ನಾನ ಮಾಡುತ್ತಿರುವುದನ್ನು ಕಂಡ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದು, ಈ ರೀತಿ ಕೆರೆಗಳಲ್ಲಿ ರಾಸಾಯನಿಕ ಮಿಶ್ರಿತ ಸೋಪು ಮತ್ತು ಶಾಂಪುಗಳನ್ನು ಬಳಸಿ ಸ್ನಾನ ಮಾಡುವುದರಿಂದ ಇಲ್ಲಿ ವಾಸಿಸುವ ಮೀನು ಮತ್ತು ಇತರೆ ಜಲಚರಗಳಿಗೆ ಹಾನಿ ಮಾಡುತ್ತದೆ ಎಂದು ಕಿಡಿಕಾರಿದ್ದಾರೆ. "ಬೇಜವಾಬ್ದಾರಿಯುತ" ನಡವಳಿಕೆಯನ್ನು ಖಂಡಿಸಿದ್ದಾರೆ.
ಭಾರತೀಯರು ಎಂದು ಕಿಡಿ
ಇನ್ನು ಈ ರೀತಿ ಕೆರೆಯಲ್ಲಿ ಸ್ನಾನ ಮಾಡುತ್ತಿರುವುದು ಭಾರತೀಯರು ಎಂದು ಕೆಲವರು ಕಿಡಿಕಾರಿದ್ದು, ಕೆನಡಾದಲ್ಲಿ ದಿನೇ ದಿನೇ ವಲಸಿದರ ಹಾವಳಿ ಹೆಚ್ಚಾಗುತ್ತಿದೆ ಎಂದು ಕೆಲವರು ಕಿಡಿಕಾರಿದ್ದಾರೆ. "ಕೆನಡಾದ ಕಡಲತೀರಗಳು ವಿದೇಶಿಯರಿಗೆ ಸ್ನಾನಗೃಹಗಳಾಗಿ ಬದಲಾಗುತ್ತಿವೆ. ಕೆನಡಾವು 3ನೇ ವಿಶ್ವ ರಾಷ್ಟ್ರವಾಗಿ ರೂಪಾಂತರಗೊಳ್ಳುವುದು ಪ್ರತಿದಿನ ನಡೆಯುತ್ತಿದೆ" ಎಂದು X ನಲ್ಲಿ ಕೆಲವರು ಟ್ವೀಟ್ ಮಾಡಿದ್ದಾರೆ.
ಮತ್ತೆ ಕೆಲವರು ಈ ಕೃತ್ಯವನ್ನು ಮಾಲಿನ್ಯಕಾರಕ ಮತ್ತು ಅಗೌರವ ಎಂದು ಟೀಕಿಸಿದ್ದು, ಅನೇಕ ಬಳಕೆದಾರರು ಪೊಲೀಸ್ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಕೆಲವರು ಪರಿಸರ ಜವಾಬ್ದಾರಿಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಹತಾಶೆ ವ್ಯಕ್ತಪಡಿಸಿದ್ದಾರೆ.
"ಬೀಚ್‌ನಲ್ಲಿ ಸೋಪ್ ಮತ್ತು ಶಾಂಪೂ ಬಳಸಿ ಸ್ನಾನ ಮಾಡುವುದು ಪರಿಸರಕ್ಕೆ ಹಾನಿಕಾರಕ ಮತ್ತು ಜಲಮೂಲದ ಸೂಕ್ಷ್ಮ ಪರಿಸರ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಅನುಕೂಲಕರವೆಂದು ತೋರುತ್ತದೆಯಾದರೂ, ಸಾಗರಗಳು, ಸರೋವರಗಳು ಅಥವಾ ನದಿಗಳಂತಹ ನೈಸರ್ಗಿಕ ನೀರಿನ ಮೂಲಗಳಲ್ಲಿ ಸೋಪ್ ಬಳಸುವುದರಿಂದ ನೀರಿನ ರಸಾಯನಶಾಸ್ತ್ರವನ್ನು ಅಡ್ಡಿಪಡಿಸಬಹುದು. ಜಲಚರಗಳಿಗೆ ಹಾನಿ ಮಾಡಬಹುದು ಮತ್ತು ಇತರ ಕಡಲತೀರಕ್ಕೆ ಹೋಗುವವರ ಆರೋಗ್ಯದ ಮೇಲೆ ಸಂಭಾವ್ಯವಾಗಿ ಪರಿಣಾಮ ಬೀರುತ್ತದೆ" ಎಂದು ಮತ್ತೋರ್ವ ಬಳಕೆದಾರ ಕಿಡಿಕಾರಿದ್ದಾರೆ.
Advertisement