
ಮಾಸ್ಕೋ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಹೇರಿಕೆ ಮೂಲಕ ಭಾರತವನ್ನು ಹಣಿಯಲು ಪ್ರಯತ್ನಿಸುತ್ತಿದ್ದರೆ ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಭಾರತದ ಬೆನ್ನಿಗೆ ನಿಂತಿದ್ದು, 'ಜಾಗತಿಕ ವ್ಯವಹಾರಗಳಲ್ಲಿ ಭಾರತದ 'ಅರ್ಹ ಅಧಿಕಾರ'ವನ್ನು ಶ್ಲಾಘಿಸಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಜಾಗತಿಕ ವ್ಯವಹಾರಗಳಲ್ಲಿ ಭಾರತದ 'ಅರ್ಹ ಅಧಿಕಾರ'ವನ್ನು ಶ್ಲಾಘಿಸಿದ್ದು, ಪ್ರಮುಖ ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅದರ ಸಕ್ರಿಯ ಪಾತ್ರವನ್ನು ಎತ್ತಿ ತೋರಿಸಿದ್ದಾರೆ.
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ ಸ್ವಾತಂತ್ರ್ಯ ದಿನಾಚರಣೆಯ ಸಂದೇಶಗಳಲ್ಲಿ, ಪುಟಿನ್ ಎರಡೂ ರಾಷ್ಟ್ರಗಳ ನಡುವಿನ "ವಿಶೇಷ ಸವಲತ್ತು ಪಡೆದ ಕಾರ್ಯತಂತ್ರದ ಪಾಲುದಾರಿಕೆ"ಯನ್ನು ಬಲಪಡಿಸುವ ರಷ್ಯಾದ ಬದ್ಧತೆಯನ್ನು ಒತ್ತಿ ಹೇಳಿದ್ದಾರೆ.
"ಭಾರತವು ವಿಶ್ವ ರಂಗದಲ್ಲಿ ಅರ್ಹವಾದ ಅಧಿಕಾರವನ್ನು ಹೊಂದಿದೆ ಮತ್ತು ಅಂತಾರಾಷ್ಟ್ರೀಯ ಕಾರ್ಯಸೂಚಿಯಲ್ಲಿರುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಕ್ರಿಯವಾಗಿ ಭಾಗವಹಿಸುತ್ತದೆ. ಭಾರತದೊಂದಿಗೆ ವಿಶೇಷ ಸವಲತ್ತು ಪಡೆದ ಕಾರ್ಯತಂತ್ರದ ಪಾಲುದಾರಿಕೆಯ ನಮ್ಮ ಸಂಬಂಧಗಳನ್ನು ನಾವು ಗೌರವಿಸುತ್ತೇವೆ.
ಜಂಟಿ ಪ್ರಯತ್ನಗಳ ಮೂಲಕ, ರಷ್ಯಾ ಮತ್ತು ಭಾರತವು ವಿವಿಧ ಕ್ಷೇತ್ರಗಳಲ್ಲಿ ರಚನಾತ್ಮಕ ದ್ವಿಪಕ್ಷೀಯ ಸಹಕಾರವನ್ನು ಸಮಗ್ರವಾಗಿ ಹೆಚ್ಚಿಸುವುದನ್ನು ಮುಂದುವರಿಸುತ್ತದೆ. ಇದು ನಮ್ಮ ಸ್ನೇಹಪರ ಜನರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಪೂರೈಸುತ್ತದೆ ಮತ್ತು ಪ್ರಾದೇಶಿಕ-ಜಾಗತಿಕ ಮಟ್ಟದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಬಲಪಡಿಸುವುದಕ್ಕೆ ಅನುಗುಣವಾಗಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದರು.
ಅಲಾಸ್ಕಾದ ಆಂಕಾರೇಜ್‌ನಲ್ಲಿ ಶುಕ್ರವಾರ ನಡೆಯಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಉನ್ನತ ಮಟ್ಟದ ಸಭೆಗೂ ಮುನ್ನ ಪುಟಿನ್ ಅವರಿಂದ ಈ ಹೇಳಿಕೆ ಬಂದಿದ್ದು, ಭಾರತಕ್ಕೆ ಹೊಸ ಆಶಾಭಾವ ಮೂಡುವಂತಾಗಿದೆ.
ಟ್ರಂಪ್ ಹೇಳಿಕೆ
ಏತನ್ಮಧ್ಯೆ, ರಷ್ಯಾದಿಂದ ತೈಲ ಖರೀದಿಸುವುದಕ್ಕಾಗಿ ಭಾರತದ ಮೇಲೆ ವಿಧಿಸಲಾದ ಸುಂಕಗಳಿಂದಾಗಿ ರಷ್ಯಾ ತನ್ನ"ಎರಡನೇ ಅತಿದೊಡ್ಡ ಗ್ರಾಹಕನನ್ನು" ಕಳೆದುಕೊಳ್ಳುತ್ತಿರುವುದರಿಂದ ಅಮೆರಿಕ ಜೊತೆ ಸಭೆ ನಡೆಸುವ ನಿರ್ಧಾರದ ಮೇಲೆ ಪ್ರಭಾವ ಬೀರಿವೆ ಎಂದು ಟ್ರಂಪ್ ಹೇಳಿದ್ದಾರೆ.
ಗುರುವಾರ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, "ಎಲ್ಲವೂ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುತ್ತೇನೆ. ನೀವು ರಷ್ಯಾ ಮತ್ತು ತೈಲ ಖರೀದಿಯೊಂದಿಗೆ ವ್ಯವಹರಿಸುತ್ತಿರುವುದರಿಂದ ನಾವು ನಿಮಗೆ ಶುಲ್ಕ ವಿಧಿಸುತ್ತೇವೆ" ಎಂದು ಭಾರತಕ್ಕೆ ಹೇಳಿದಾಗ, ಅದು "ಮೂಲಭೂತವಾಗಿ ರಷ್ಯಾ ತೈಲ ಖರೀದಿಯಿಂದ ಹೊರ ಬಂದಿದೆ" ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ಭಾರತ ಈ ವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
Advertisement