
ಬೀಜಿಂಗ್: ಈ ತಿಂಗಳ ಅಂತ್ಯದಲ್ಲಿ ತಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯು ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಸಭೆಯಾಗಲಿದೆ ಎಂದು ಚೀನಾ ಶುಕ್ರವಾರ ಹೇಳಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 20 ವಿಶ್ವ ನಾಯಕರು ಭಾಗವಹಿಸಲಿದ್ದಾರೆ.
10 ಸದಸ್ಯರ ಶೃಂಗಸಭೆಯು ಆಗಸ್ಟ್ 31 ರಿಂದ ಸೆಪ್ಟೆಂಬರ್ 1ರವರೆಗೆ ತಿಯಾಂಜಿನ್ ನಲ್ಲಿ ನಡೆಯಲಿದ್ದು, ಇದು ಚೀನಾ ಆಯೋಜಿಸುತ್ತಿರುವ ಐದನೇ ಶೃಂಗಸಭೆಯಾಗಿದೆ. ಇದು SCO ಇತಿಹಾಸದಲ್ಲಿ ಅತ್ಯಂತ ದೊಡ್ಡ ಸಭೆಯಾಗಲಿದೆ ಎಂದು ಚೀನಾದ ಸಹಾಯಕ ವಿದೇಶಾಂಗ ಸಚಿವ ಲಿಯು ಬಿನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಈ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಲ್ಲದೆ, ಪ್ರಧಾನಿ ಮೋದಿ ಮತ್ತು ಹಲವಾರು ವಿಶ್ವ ನಾಯಕರು ಭಾಗವಹಿಸಲಿದ್ದಾರೆ ಎಂದು ಲಿಯು ಹೇಳಿದರು.
ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಇಂಡೊನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಮತ್ತು ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಚಿನ್ಹ್, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್, ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ವಿಶ್ವಸಂಸ್ಥೆ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಮತ್ತು ಎಸ್‌ಸಿಒ ಪ್ರಧಾನ ಕಾರ್ಯದರ್ಶಿ ನೂರ್ಲಾನ್ ಯೆರ್ಮೆಕ್‌ಬಾಯೆವ್ ಸೇರಿದಂತೆ 10 ಅಂತರರಾಷ್ಟ್ರೀಯ ಸಂಸ್ಥೆಗಳ ಅಧಿಕಾರಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
10 ಸದಸ್ಯರ SCO ಶೃಂಗಸಭೆಯನ್ನು ಈ ಬಾರಿ ಚೀನಾ ಆಯೋಜಿಸುತ್ತಿದೆ. ರಷ್ಯಾ, ಭಾರತ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ತಜಕಿಸ್ತಾನ್, ಉಜ್ಬೇಕಿಸ್ತಾನ್, ಬೆಲಾರಸ್ ಮತ್ತು ಚೀನಾ SCO ಸದಸ್ಯ ರಾಷ್ಟ್ರಗಳಾಗಿವೆ.
Advertisement