
ರಷ್ಯಾ-ಉಕ್ರೇನ್ ಸಂಘರ್ಷವನ್ನು "ಮೋದಿ ಯುದ್ಧ" ಎಂದು ಕರೆಯುವ ಮೂಲಕ ಅಮೆರಿಕ ಆಡಳಿತ ಶಕ್ತಿಕೇಂದ್ರ ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ, ರಷ್ಯಾದೊಂದಿಗೆ ಭಾರತದ ನಿರಂತರ ತೈಲ ವ್ಯಾಪಾರ ದೀರ್ಘ ಸಂಘರ್ಷಕ್ಕೆ ಕಾರಣವಾಗಿದೆ ಎಂದು ದೂಷಿಸಿದ್ದಾರೆ.
ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ನವರೊ ಮಾತನಾಡಿ, ರಷ್ಯಾವನ್ನು ಪ್ರತ್ಯೇಕಿಸಲು ನಡೆಯುತ್ತಿರುವ ಜಾಗತಿಕ ಪ್ರಯತ್ನಗಳನ್ನು ಭಾರತ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು. ರಷ್ಯಾದಿಂದ ಭಾರತದ ರಿಯಾಯಿತಿ ತೈಲ ಖರೀದಿಗಳು ಪರೋಕ್ಷವಾಗಿ ಅಮೆರಿಕ ಮತ್ತು ಯುರೋಪ್ ನ್ನು ಉಕ್ರೇನ್‌ನ ರಕ್ಷಣೆಗೆ ಹಣಕಾಸು ಒದಗಿಸುವಂತೆ ಮಾಡುತ್ತಿವೆ ಎಂದು ಹೇಳಿದ್ದಾರೆ.
ಉಕ್ರೇನ್ ನಮ್ಮಲ್ಲಿ ಮತ್ತು ಯುರೋಪ್‌ಗೆ ಬಂದು ನಮಗೆ ಹೆಚ್ಚಿನ ಹಣ ನೀಡಿ ಎಂದು ಕೇಳುತ್ತದೆ. ಭಾರತ ಮಾಡುತ್ತಿರುವ ಕೆಲಸದಿಂದಾಗಿ ಅಮೆರಿಕದಲ್ಲಿರುವ ಪ್ರತಿಯೊಬ್ಬರೂ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಗ್ರಾಹಕರು ನಷ್ಟ ಅನುಭವಿಸುತ್ತಿದ್ದಾರೆ, ಉದ್ಯಮ-ವಹಿವಾಟುಗಳು ನೆಲಕಚ್ಚುತ್ತಿವೆ.
ಹೆಚ್ಚಿನ ಭಾರತೀಯ ಸುಂಕಗಳಿಂದಾಗಿ ಕಾರ್ಮಿಕರು ಕಳೆದುಹೋಗುತ್ತಿದ್ದಾರೆ, ತೆರಿಗೆದಾರರ ಸ್ಥಿತಿ ಏನಾಗುತ್ತಿದೆ ಎಂದು ಅವರು ಕಿಡಿಕಾರಿದ್ದು ಮೋದಿಯವರು ಯುದ್ಧಕ್ಕೆ ರಷ್ಯಾಕ್ಕೆ ಹಣಕಾಸು ಒದಗಿಸುತ್ತಾರೆ ಎಂದು ಆರೋಪಿಸಿದರು.
ಇಂಧನ ನಿರ್ಧಾರಗಳಲ್ಲಿ ತನ್ನ ಸಾರ್ವಭೌಮತ್ವವನ್ನು ಪ್ರತಿಪಾದಿಸಿದ್ದಕ್ಕಾಗಿ ಅವರು ಭಾರತವನ್ನು ಟೀಕಿಸಿ ಈ ನಿಲುವನ್ನು ದುರಹಂಕಾರದ ವರ್ತನೆ ಎಂದರು.
ಭಾರತ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ. ವಿಶ್ವದ ಎಲ್ಲ ದೇಶಗಳು ಒಂದೇ ಎಂಬ ರೀತಿಯಲ್ಲಿ ವರ್ತಿಸಬೇಕು. ಪ್ರಜಾಪ್ರಭುತ್ವಗಳ ಪರವಾಗಿರಿ" ಎಂದು ಭಾರತವನ್ನು ನವರೊ ಒತ್ತಾಯಿಸಿದರು, ರಷ್ಯಾ ಮತ್ತು ಚೀನಾದೊಂದಿಗಿನ ಭಾರತದ ಸಂಬಂಧಗಳನ್ನು ಟೀಕಿಸಿದ ಅವರು, ಈ ಎರಡೂ ದೇಶಗಳನ್ನು"ಸರ್ವಾಧಿಕಾರಿಗಳು" ಎಂದು ಕರೆದರು.
ಅಮೆರಿಕ ಟ್ರಂಪ್ ಆಡಳಿತವು ಭಾರತೀಯ ಸರಕುಗಳ ಮೇಲೆ ಶೇ. 50 ರಷ್ಟು ಸುಂಕಗಳನ್ನು ಜಾರಿಗೆ ತಂದ ನಂತರ ನವರೊ ಅವರು ಈ ಹೇಳಿಕೆ ನೀಡಿದ್ದಾರೆ, ಅದರಲ್ಲಿ ಶೇಕಡಾ 25ರಷ್ಟು ಸುಂಕವು ಭಾರತವು ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರಗಳ ಆಮದು ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದೆ.
ಭಾರತದ ವಿದೇಶಾಂಗ ಸಚಿವಾಲಯವು ಅಮೆರಿಕದ ಸುಂಕ ಹೇರಿಕೆ ಕ್ರಮವನ್ನು "ಅತ್ಯಂತ ದುರದೃಷ್ಟಕರ" ಎಂದು ಕರೆದಿದ್ದು, ಅದರ ಇಂಧನ ನಿರ್ಧಾರಗಳು ಮಾರುಕಟ್ಟೆ ಆಧಾರಿತವಾಗಿವೆ. ಅದರ 1.4 ಬಿಲಿಯನ್ ಜನರಿಗೆ ಇಂಧನವನ್ನು ಪಡೆಯಲು ಅತ್ಯಗತ್ಯ ಎಂದು ಒತ್ತಿ ಹೇಳಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕ ನಿಲುವು ಬೂಟಾಟಿಕೆ ಎಂದು ಕರೆದಿದ್ದಾರೆ. ಭಾರತವು, ರಷ್ಯಾದ ತೈಲದ ಅತಿದೊಡ್ಡ ಖರೀದಿದಾರರಲ್ಲ, ಅತಿ ಹೆಚ್ಚು ಖರೀದಿ ದೇಶ ಚೀನಾವಾಗಿದೆ. ಎಲ್‌ಎನ್‌ಜಿ ಅಲ್ಲ, ಅದು ಐರೋಪ್ಯ ಒಕ್ಕೂಟವಾಗಿದೆ. ರಷ್ಯಾದ ತೈಲ ಖರೀದಿಗಳ ಮೂಲಕ ಸೇರಿದಂತೆ ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ನಮಗೆ ಉತ್ತೇಜನ ನೀಡಲಾಗಿತ್ತು ಎಂದಿದ್ದರು.
ಇಂತಹ ಪರಿಸ್ಥಿತಿಯಲ್ಲಿ ನಮ್ಮ ವಿರುದ್ಧ ಅಮೆರಿಕ ಮಾಡುತ್ತಿರುವ ಆರೋಪವು ಗೊಂದಲಮಯವಾಗಿದೆ ಎಂದು ಅವರು ಮಾಸ್ಕೋದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
Advertisement