
ಲಾಸ್ ಏಂಜಲೀಸ್: ಅಮೆರಿಕದಲ್ಲಿ ರಸ್ತೆಯಲ್ಲಿ ಮಚ್ಚು ತೋರಿಸಿ ಹುಟ್ಟಾಟ ಮೆರೆದಿದ್ದ ಸಿಖ್ ವ್ಯಕ್ತಿಯನ್ನು ಪೊಲೀಸರು ಎನ್ ಕೌಂಟರ್ ನಲ್ಲಿ ಕೊಂದು ಹಾಕಿದ್ದಾರೆ.
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಕಾರು ನಿಲ್ಲಿಸಿ ಮಚ್ಚು ತೋರಿಸಿ ಆತಂಕ ಸೃಷ್ಟಿಸಿದ್ದ ಸಿಖ್ ಸಮುದಾಯದ ವ್ಯಕ್ತಿಯನ್ನು ಪೊಲೀಸರು ಗುಂಡು ಹಾರಿಸಿ ಹತ ಮಾಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಲಾಸ್ ಏಂಜಲೀಸ್‌ನ ಡೌನ್‌ಟೌನ್‌ನ ಕ್ರಿಪ್ಟೋ.ಕಾಮ್ ಅರೆನಾ ಬಳಿ ಈ ಘಟನೆ ನಡೆದಿದ್ದು, ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ವ್ಯಕ್ತಿಯನ್ನು 35 ವರ್ಷದ ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ.
ಗುರುಪ್ರೀತ್ ಸಿಂಗ್ ಬೀದಿಯಲ್ಲಿ ಸಿಖ್ ಸಮುದಾಯದ ಸಾಂಪ್ರದಾಯಿಕ ಸಮರ ಕಲೆಯಾದ ಗಟ್ಕಾವನ್ನು ಪ್ರದರ್ಶಿಸುತ್ತಿದ್ದ ಎಂದು ಹೇಳಲಾಗಿದೆಯಾದರೂ ಕೆಲವೇ ಕ್ಷಣಗಳಲ್ಲಿ ಆತ ಮಚ್ಚನ್ನು ಹಿಡಿದು ಹತ್ತಿರದ ಜನರನ್ನು ಬೆದರಿಸುತ್ತಿದ್ದ. ಅಲ್ಲದೆ ಮಾರ್ಗದಲ್ಲಿ ಬಂದ ಕಾರುಗಳ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಗುರುಪ್ರೀತ್ ಸಿಂಗ್ ಹುಚ್ಚಾಟ ನೋಡಿದ ಸ್ಥಳೀಯರು 911 ಗೆ ಅಂದರೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಗುರುಪ್ರೀತ್ ಸಿಂಗ್ ಹುಚ್ಚಾಟ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಗುರುಪ್ರೀತ್ ಸಿಂಗ್ ಅವರ ಮಾತನ್ನು ಕೇಳದೇ ಮಚ್ಚಿನ ಸಾಹಸ ಮುಂದುವರೆಸಿದ್ದರು. ಈ ವೇಳೆ ಪೊಲೀಸರು ಆತನ ಮೇಲೆ ಗುಂಡುಹಾರಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಪೊಲೀಸರೇ ತಮ್ಮ LAPD ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
Advertisement