
ಕೈರೋ: ಯೆಮೆನ್‌ನ ರಾಜಧಾನಿ ಸನಾದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹೌತಿ ಬಂಡುಕೋರರ ಪ್ರಧಾನ ಮಂತ್ರಿಯ ಹತ್ಯೆಯಾಗಿದೆ ಎಂದು ಹೌತಿಗಳು ಶನಿವಾರ ಹೇಳಿದ್ದಾರೆ. ಅವರು ಇರಾನ್ ಬೆಂಬಲಿತ ಬಂಡುಕೋರರ ವಿರುದ್ಧ ಇಸ್ರೇಲಿ-ಯುಎಸ್ ನಡೆಸಿದ ದಾಳಿಯಲ್ಲಿ ಕೊಲ್ಲಲ್ಪಟ್ಟ ಅತ್ಯಂತ ಹಿರಿಯ ಹೌತಿ ಅಧಿಕಾರಿಯೂ ಆಗಿದ್ದಾರೆ.
ಸನಾದಲ್ಲಿ ಗುರುವಾರ ನಡೆದ ದಾಳಿಯಲ್ಲಿ ಹಲವಾರು ಮಂತ್ರಿಗಳೊಂದಿಗೆ ಅಹ್ಮದ್ ಅಲ್-ರಹ್ವಿ ಕೊಲ್ಲಲ್ಪಟ್ಟರು ಎಂದು ಬಂಡುಕೋರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇತರ ಸಚಿವರು ಮತ್ತು ಅಧಿಕಾರಿಗಳು ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿವೆ.
ಹೌತಿ ಸರ್ಕಾರದ ಹಿರಿಯ ಅಧಿಕಾರಿಗಳು ಸೇರಿದ್ದ ಕಾರ್ಯಾಗಾರವೊಂದರ ಮೇಲೆ ನಡೆದಿದೆ. ಇದರಲ್ಲಿ ಅವರು ತಮ್ಮ ಕಳೆದ ವರ್ಷದ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತಿದ್ದರು ಎಂದು ಹೌತಿಗಳು ತಿಳಿಸಿದ್ದಾರೆ. ಈ ವೇಳೆ ದಾಳಿ ಮಾಡಲಾಗಿದ್ದು, ಪ್ರಧಾನಿ ಸೇರಿದಂತೆ ಹಲವು ಸಚಿವರು ಸಾವನಪ್ಪಿದ್ದಾರೆ.
ಅಹ್ಮದ್ ಅಲ್-ರಹ್ವಿ ಯೆಮೆನ್‌ನ ಅಬ್ಯಾನ್ ಪ್ರಾಂತ್ಯದವರು ಮತ್ತು ಮಾಜಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್‌ನ ಮಿತ್ರರಾಗಿದ್ದರು. 2014ರಲ್ಲಿ ಹೌತಿಗಳು ಸನಾವನ್ನು ವಶಪಡಿಸಿಕೊಂಡಾಗ, ಅವರನ್ನು ಆಗಸ್ಟ್ 2024ರಲ್ಲಿ ಪ್ರಧಾನ ಮಂತ್ರಿಯಾಗಿ ನೇಮಿಸಲಾಯಿತು. ಆದರೆ, ಅವರು ಹೌತಿ ನಾಯಕತ್ವದ ಒಳವಲಯದಲ್ಲಿ ಭಾಗವಾಗಿರಲಿಲ್ಲ ಮತ್ತು ಅವರ ಉಪಪ್ರಧಾನಿ ಮೊಹಮ್ಮದ್ ಮೊಫ್ತಾಹ್ ದೈನಂದಿನ ಆಡಳಿತವನ್ನು ನಿರ್ವಹಿಸುತ್ತಿದ್ದರು.
ಈ ದಾಳಿಯ ನಂತರ, ಮೊಫ್ತಾಹ್ ತಾತ್ಕಾಲಿಕ ಪ್ರಧಾನ ಮಂತ್ರಿಯ ಜವಾಬ್ದಾರಿಯನ್ನು ವಹಿಸಿಕೊಂಡರು. ಹೌತಿಗಳ ಸುಪ್ರೀಂ ಪೊಲಿಟಿಕಲ್ ಕೌನ್ಸಿಲ್‌ನ ಮುಖ್ಯಸ್ಥ ಮಹ್ದಿ ಅಲ್-ಮಶತ್ “ನಾವು ಸೇಡು ತೀರಿಸಿಕೊಳ್ಳುತ್ತೇವೆ” ಎಂದು ಘೋಷಿಸಿದ್ದಾರೆ.
ಇಸ್ರೇಲ್ ಮತ್ತು ಕೆಂಪು ಸಮುದ್ರದಲ್ಲಿನ ಹಡಗುಗಳ ಮೇಲೆ ಬಂಡುಕೋರರ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿಕ ಮತ್ತು ಇಸ್ರೇಲ್ ಹೌತಿಗಳ ವಿರುದ್ಧ ತಮ್ಮ ವಾಯು ಮತ್ತು ನೌಕಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
ಯುಎಸ್ ಮತ್ತು ಇಸ್ರೇಲಿ ದಾಳಿಯಿಂದ ಯೆಮನ್ ನಲ್ಲಿ ಡಜನ್ ಗಟ್ಟಲೇ ಜನರ ಹತ್ಯೆಯಾಗಿದೆ.
Advertisement