ಟೆಲ್ ಅವೀವ್: ಗಾಜಾದಲ್ಲಿ ಹಮಾಸ್, ಲೆಬೆನಾನ್ ನಲ್ಲಿ ಹೆಜ್ಬುಲ್ಲಾ ಮತ್ತು ಸಿರಿಯಾ ಸೇನೆಯೊಂದಿಗೆ ಯುದ್ಧ ನಡೆಸುತ್ತಿರುವ ಇಸ್ರೇಲ್ ಸೇನೆ ಇದೀಗ ಯೆಮೆನ್ ಮೇಲೂ ವಾಯುದಾಳಿ ಆರಂಭಿಸಿದೆ.
ಹೌದು.. ಇಸ್ರೇಲಿ ಏರ್ ಫೋರ್ಸ್ (IAF) ಯೆಮೆನ್‌ನಲ್ಲಿನ ಮಿಲಿಟರಿ ಘಟಕಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಯನ್ನು ಪ್ರಾರಂಭಿಸಿದ್ದು, ನಿರ್ದಿಷ್ಟವಾಗಿ ವಿದ್ಯುತ್ ಸ್ಥಾವರಗಳು ಮತ್ತು ಬಂದರು ಸೇರಿದಂತೆ ಹೌತಿ ಬಂಡುಕೋರರ-ನಿಯಂತ್ರಿತ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ತೀವ್ರ ದಾಳಿ ನಡೆಸಿದೆ. IDF ಶುಕ್ರವಾರ ಬೈರುತ್‌ನಲ್ಲಿನ ಲೆಬನಾನಿನ ರಾಜಧಾನಿಯ ಮೇಲೆ ನಿಖರವಾದ ದಾಳಿ ನಡೆಸಿ ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ನನ್ನು ಹೊಡೆದುರುಳಿಸಿತ್ತು.
ಈ ಕುರಿತು ಸ್ವತಃ ಇಸ್ರೇಲ್ ಸೇನೆ (IDF) ಎಕ್ಸ್ ನಲ್ಲಿ ಮಾಹಿತಿ ನೀಡಿದ್ದು, 'ಇಸ್ರೇಲಿ ಸೇನಾ ಪಡೆಗಳು (IDF) "ಐಎಎಫ್ ಇಸ್ರೇಲ್ ವಿರುದ್ಧದ ಇತ್ತೀಚಿನ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಯೆಮೆನ್‌ನಲ್ಲಿ ಹೌತಿ ಭಯೋತ್ಪಾದಕ ಆಡಳಿತಕ್ಕೆ ಸೇರಿದ ಮಿಲಿಟರಿ ಗುರಿಗಳನ್ನು ಹೊಡೆದುರುಳಿಸಿದೆ" ಎಂದು ಹೇಳಿದೆ.
ಅಂತೆಯೇ ತನ್ನ ಈ ನಿರ್ಧಿಷ್ಟ ಗುರಿಗಳಲ್ಲಿ ವಿದ್ಯುತ್ ಸ್ಥಾವರಗಳು ಮತ್ತು ಬಂದರು ಸೇರಿದ್ದು, ಮಿಲಿಟರಿ ಸರಬರಾಜು ಮತ್ತು ತೈಲದ ಜೊತೆಗೆ ಇರಾನ್ ಶಸ್ತ್ರಾಸ್ತ್ರಗಳನ್ನು ಪ್ರದೇಶಕ್ಕೆ ವರ್ಗಾಯಿಸಲು ಹೌತಿಗಳು ಬಳಸುತ್ತಿದ್ದರು ಎಂದು ಆರೋಪಿಸಿದೆ.
ಏತನ್ಮಧ್ಯೆ, ಹೈಫಾ ಮತ್ತು ಉತ್ತರ ಇಸ್ರೇಲ್ ಅನ್ನು ಗುರಿಯಾಗಿಟ್ಟುಕೊಂಡು ಹಿಜ್ಬುಲ್ಲಾ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
ಏಕಕಾಲದಲ್ಲಿ 4 ಶತ್ರು ಗಳೊಂದಿಗೆ ಇಸ್ರೇಲ್ ಯುದ್ಧ
ಇನ್ನು ಪುಟ್ಟ ರಾಷ್ಟ್ರ ಇಸ್ರೇಲ್ ಇದೀಗ ಏಕಕಾಲದಲ್ಲಿ ತನ್ನ ನಾಲ್ಕು ಶತೃಗಳ ವಿರುದ್ಧ ಯುದ್ಧ ನಡೆಸುತ್ತಿದೆ. ಗಾಜಾದಲ್ಲಿ ಹಮಾಸ್, ಲೆಬೆನಾನ್ ನಲ್ಲಿ ಹೆಜ್ಬುಲ್ಲಾ ಮತ್ತು ಸಿರಿಯಾ ಸೇನೆಯೊಂದಿಗೆ ಯುದ್ಧ ನಡೆಸುತ್ತಿದ್ದ ಇಸ್ರೇಲ್ ಇದೀಗ ಯೆಮೆನ್ ಹೌತಿ ಬಂಡುಕೋರರ ವಿರುದ್ಧವೂ ಯುದ್ಧ ಸಾರಿದೆ. ಅಲ್ಲದೆ ಈ ಬಗ್ಗೆ ಮಾತನಾಡಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಯೋತ್ಪಾದನೆಯನ್ನು ನಿರ್ನಾಮ ಮಾಡುವ ಶಪಥಗೈದಿದ್ದಾರೆ.
Advertisement