

ಢಾಕಾ: ಭಾರತ ದೇಶವನ್ನು ಛಿದ್ರ ಛಿದ್ರ ಮಾಡದ ಹೊರತು ಬಾಂಗ್ಲಾದೇಶದಲ್ಲಿ ಶಾಂತಿ ಸ್ಥಾಪನೆ ಸಾಧ್ಯವಿಲ್ಲ ಎಂದು ಬಾಂಗ್ಲಾದೇಶ ಮಾಜಿ ಸೇನಾ ಮುಖ್ಯಸ್ಥ ಅಬ್ದುಲ್ಲಾ ಅಮಾನ್ ಅಜ್ಮಿ ಹೇಳಿದ್ದಾರೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹಸ್ತಾಂತರದ ಕುರಿತು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಮಾತುಕತೆ ನಡೆಯುತ್ತಿದೆ. ಅತ್ತ ಬಾಂಗ್ಲಾದೇಶದಲ್ಲೂ ಅಸ್ಥಿರತೆ ಮುಂದುವರೆದಿದ್ದು, ಪ್ರತಿಭಟನೆ ಮತ್ತು ಹಿಂಸಾಚಾರ ಮುಂದುವರೆದಿದೆ.
ಹೀಗಿರುವಾಗಲೇ ಬಾಂಗ್ಲಾದೇಶ ಮಾಜಿ ಸೇನಾ ಮುಖ್ಯಸ್ಥ ಅಬ್ದುಲ್ಲಾ ಅಮಾನ್ ಅಜ್ಮಿ ಹೇಳಿಕೆ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸ ಮಾಡಿದೆ.
ಹೌದು.. ಮಾಜಿ ಜಮಾತ್-ಇ-ಇಸ್ಲಾಮಿ ಮುಖ್ಯಸ್ಥ ಗುಲಾಮ್ ಅಜಮ್ ಅವರ ಪುತ್ರ ಬ್ರಿಗೇಡಿಯರ್ ಜನರಲ್ (ನಿವೃತ್ತ) ಅಬ್ದುಲ್ಲಾ ಅಮಾನ್ ಅಜ್ಮಿ ಭಾರತದ ವಿರುದ್ಧ ವಿಷ ಕಾರಿದ್ದು, ಭಾರತವನ್ನು ತುಂಡುಗಳಾಗಿ ವಿಭಜಿಸಿದರೆ ಮಾತ್ರ ಬಾಂಗ್ಲಾದೇಶದಲ್ಲಿ ಸಂಪೂರ್ಣ ಶಾಂತಿ ನೆಲೆಸುತ್ತದೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಢಾಕಾದ ರಾಷ್ಟ್ರೀಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಬ್ದುಲ್ಲಾ ಅಮಾನ್ ಅಜ್ಮಿ, 'ಭಾರತವನ್ನು ತುಂಡು ತುಂಡಗಳಾಗಿ ವಿಭಜಿಸಿದರೆ ಮಾತ್ರ ಬಾಂಗ್ಲಾದೇಶದಲ್ಲಿ ಸಂಪೂರ್ಣ ಶಾಂತಿ ನೆಲೆಸುತ್ತದೆ, ಇಲ್ಲದಿದ್ದರೆ, ನಮ್ಮ ದೇಶದಲ್ಲಿ ಎಂದಿಗೂ ಶಾಂತಿ ಇರುವುದಿಲ್ಲ' ಎಂದು ಹೇಳಿದ್ದಾರೆ.
"ಭಾರತವನ್ನು ತುಂಡುಗಳಾಗಿ ವಿಭಜಿಸುವವರೆಗೆ ಬಾಂಗ್ಲಾದೇಶ ಸಂಪೂರ್ಣ ಶಾಂತಿಯನ್ನು ಕಾಣುವುದಿಲ್ಲ. ಭಾರತ ಯಾವಾಗಲೂ ಬಾಂಗ್ಲಾದೇಶದಲ್ಲಿ ಅಶಾಂತಿಯನ್ನು ಜೀವಂತವಾಗಿರಿಸುತ್ತದೆ.
1975 ರಿಂದ 1996 ರವರೆಗೆ ಭಾರತದ ಗಡಿಯಲ್ಲಿರುವ ಆಗ್ನೇಯ ಬಾಂಗ್ಲಾದೇಶದ ಚಿತ್ತಗಾಂಗ್ ವಿಭಾಗದ ಮೂರು ಗುಡ್ಡಗಾಡು ಜಿಲ್ಲೆಗಳನ್ನು ಒಳಗೊಂಡಿರುವ ಚಿತ್ತಗಾಂಗ್ ಬೆಟ್ಟದ ಪ್ರದೇಶಗಳಲ್ಲಿ ಭಾರತವು ಅಶಾಂತಿಗೆ ಉತ್ತೇಜನ ನೀಡಿತು ಎಂದು ಅವರು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ.
1997 ರಲ್ಲಿ ಸಹಿ ಹಾಕಿದ ಚಿತ್ತಗಾಂಗ್ ಬೆಟ್ಟದ ಪ್ರದೇಶಗಳ ಶಾಂತಿ ಒಪ್ಪಂದವು ಕೇವಲ ಪ್ರದರ್ಶನಕ್ಕಾಗಿ ಎಂದು ಅವರು ಆರೋಪಿಸಿದ್ದಾರೆ.
ಭಾರತ ತಿರುಗೇಟು
ಇನ್ನು ಅಮಾನ್ ಅಜ್ಮಿ ಅವರ ಪ್ರಚೋದನಕಾರಿ ಹೇಳಿಕೆಗಳ ಬಗ್ಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 'ಜಮಾತ್-ಎ-ಇಸ್ಲಾಮಿ ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐನ ಕೈಗೊಂಬೆಯಾಗಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬ ಕಾರಣಕ್ಕೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಜಮಾತ್-ಎ-ಇಸ್ಲಾಮಿಯನ್ನು ನಿಷೇಧಿಸಿದ್ದರು ಎಂದು ಹೇಳಿದೆ.
ಇನ್ನು ಶೇಖ್ ಹಸೀನಾ ಅವರ ಸರ್ಕಾರದ ಪತನದ ನಂತರ, ಬಾಂಗ್ಲಾದೇಶದಲ್ಲಿ ರಚನೆಯಾದ ಮಧ್ಯಂತರ ಸರ್ಕಾರವು ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಜಮಾತ್-ಎ-ಇಸ್ಲಾಮಿ ಮೇಲಿನ ನಿಷೇಧವನ್ನು ತೆಗೆದುಹಾಕಿತು.
ಇದರೊಂದಿಗೆ, ಸಂಘಟನೆಯು ಬಾಂಗ್ಲಾದೇಶ ರಾಜಕೀಯದಲ್ಲಿ ಮತ್ತೆ ಚಕ್ರ ತಿರುಗಿಸಲು ಸಿದ್ಧತೆ ನಡೆಸುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಜಮಾತ್-ಎ-ಇಸ್ಲಾಮಿ ಮೇಲಿನ ನಿಷೇಧವನ್ನು ತೆಗೆದುಹಾಕುವುದು ಮತ್ತು ಚುನಾವಣೆಗಳಲ್ಲಿ ಸ್ಪರ್ಧಿಸಲು ಅದರ ಸಿದ್ಧತೆ ಭಾರತಕ್ಕೆ ತಲೆನೋವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Advertisement