

ಒಲಿಂಡಾ: ಜಿಮ್ ನಲ್ಲಿ ಬಾರ್ಬೆಲ್ ಬಾರ್ ಎದೆ ಮೇಲೆ ಬಿದ್ದು ಬ್ರೆಜಿಲ್ ಮ್ಯೂಸಿಯಂ ನಿರ್ದೇಶಕ ದುರಂತ ಸಾವಿಗೀಡಾದ ಘಟನೆ ವರದಿಯಾಗಿದೆ.
ಡಿಸೆಂಬರ್ 1 ರಂದು ಬ್ರೆಜಿಲ್ ನ ಒಲಿಂದಾದಲ್ಲಿ ಈ ಘಟನೆ ನಡೆದಿದ್ದು, ಜಿಮ್‌ನಲ್ಲಿ ತೂಕ ಎತ್ತುವಾಗ 55 ವರ್ಷದ ಬ್ರೆಜಿಲ್ ನ ಮ್ಯೂಸಿಯಂ ನಿರ್ದೇಶಕ ರೊನಾಲ್ಡ್ ಮಾಂಟೆನೆಗ್ರೊ (Ronald Montenegro) ಎದೆ ಮೇಲೆ ಬಾರ್ಬೆಲ್ ಬಾರ್ ಬಿದ್ದು ಸಾವನ್ನಪ್ಪಿದ್ದಾರೆ.
ರೊನಾಲ್ಡ್ ಮಾಂಟೆನೆಗ್ರೊ ಹವ್ಯಾಸಿ ವೇಟ್‌ಲಿಫ್ಟರ್ ಕೂಡ ಆಗಿದ್ದು, ಬ್ರೆಜಿಲ್ ನ ವಸ್ತುಸಂಗ್ರಹಾಲಯ ಅಧ್ಯಕ್ಷರಾಗಿದ್ದರು ಎಂದು ತಿಳಿದುಬಂದಿದೆ.
ಬೆಂಚ್ ಪ್ರೆಸ್ ಬಾರ್ಬೆಲ್ ಎತ್ತುವಾಗ ಬಾರ್ ಜಾರಿ ರೊನಾಲ್ಡ್ ಮಾಂಟೆನೆಗ್ರೊ ಅವರ ಎದೆ ಮೇಲೆ ಬಿದ್ದಿದೆ. ಈ ವೇಳೆ ರೊನಾಲ್ಡ್ ಮಾಂಟೆನೆಗ್ರೊ ನೋವಿನಿಂದ ಕುಸಿದಿದ್ದಾರೆ. ಅದೇ ಸಂದರ್ಭದಲ್ಲಿ ಜಿಮ್ ನಲ್ಲಿದ್ದ ಇತರರು ಅವರ ನೆರವಿಗೆ ಧಾವಿಸಿದ್ದು, ಅವರ ದೇಹದ ಮೇಲಿದ್ದ ಬಾರ್ ತೆಗೆದು ಪಕಕ್ಕೆ ಸರಿಸಿದ್ದಾರೆ.
ಕೂಡಲೇ ರೊನಾಲ್ಡ್ ಮಾಂಟೆನೆಗ್ರೊ ರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ರೊನಾಲ್ಡ್ ಮಾಂಟೆನೆಗ್ರೊ ಸಾವನ್ನಪ್ಪಿದ್ದಾರೆ. ಪೊಲೀಸರು ಘಟನೆಯ ತನಿಖೆ ನಡೆಸಿ ಇದು ಆಕಸ್ಮಿಕ ಅಪಘಾತ ಎಂದು ದೃಢಪಡಿಸಿದ್ದಾರೆ.
ಮಾಂಟೆನೆಗ್ರೊ ಒಲಿಂಡಾದಲ್ಲಿರುವ ಪಲಾಸಿಯೊ ಡಾಸ್ ಬೊನೆಕೋಸ್ ಗಿಗಾಂಟೆಸ್ ಪ್ರಖ್ಯಾತ ಮ್ಯೂಸಿಯಂ ನಿರ್ದೇಶಕರಾಗಿದ್ದಾರೆ. ಇಲ್ಲಿ 15 ಅಡಿಗೂ ಎತ್ತರದ ಮಾನವಾಕೃತಿ ಬೊಂಬೆಗಳಿದ್ದು, ಬ್ರೆಜಿಲ್ ಸಾಂಪ್ರದಾಯಿಕ ಉತ್ಸವದ ಪ್ರಮುಖ ಆಕರ್ಷಣೆಯಾಗುವ ಈ ಬೊಂಬೆಗಳಿಗೆಂದೇ ಇರುವ ಮ್ಯೂಸಿಯಂ ಇದಾಗಿದೆ.
ಇಂತಹ ಮ್ಯೂಸಿಯಂ ನಿರ್ದೇಶಕರಾಗಿದ್ದ ರೊನಾಲ್ಡ್ ಮಾಂಟೆನೆಗ್ರೊ ನಗರದ ಸಾಂಸ್ಕೃತಿಕ ಸಂಪ್ರದಾಯಗಳನ್ನು ಸಂರಕ್ಷಿಸಲು ಸಹಾಯ ಮಾಡಿದ ಅತ್ಯಗತ್ಯ ವ್ಯಕ್ತಿ ಎಂದೂ ಖ್ಯಾತಿ ಗಳಿಸಿದ್ದರು. ಅವರನ್ನು ಸಮರ್ಪಿತ ನಾಯಕ, ಕಲಾವಿದ ಮತ್ತು ಕಾರ್ನೀವಲ್ ಸಂಸ್ಕೃತಿಯ ಬಲವಾದ ಬೆಂಬಲಿಗ ಎಂದು ಬಣ್ಣಿಸಲಾಗುತ್ತಿತ್ತು.
Advertisement