

ಪೋರ್ಚುಗಲ್‌ಗೆ ವಲಸೆ ಹೋಗಲು ಯತ್ನಿಸುತ್ತಿದ್ದ ಭಾರತೀಯ ದಂಪತಿ ಮತ್ತು ಅವರ ಮೂರು ವರ್ಷದ ಮಗಳನ್ನು ಲಿಬಿಯಾದಲ್ಲಿ ಅಪಹರಿಸಲಾಗಿದೆ ಎಂದು ಶನಿವಾರ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಈ ಕುಟುಂಬವು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಬಾದಲ್‌ಪುರ ಗ್ರಾಮದವರಾಗಿದ್ದು, ಅವರನ್ನು ಕಿಸ್ಮತ್‌ಸಿನ್ಹ್ ಚಾವ್ಡಾ, ಅವರ ಪತ್ನಿ ಹೀನಾಬೆನ್ ಮತ್ತು ಮಗಳು ದೇವಾಂಶಿ ಎಂದು ಗುರುತಿಸಲಾಗಿದೆ. ದಂಪತಿಯ ವಯಸ್ಸು ತಿಳಿದಿಲ್ಲವಾದರೂ, ಅವರ ಮಗಳಿಗೆ 3 ವರ್ಷ ಎನ್ನಲಾಗಿದೆ.
ಕಿಸ್ಮತ್‌ಸಿನ್ಹ್ ಅವರ ಸಹೋದರ ವಾಸಿಸುತ್ತಿರುವ ಪೋರ್ಚುಗಲ್‌ಗೆ ಹೋಗುತ್ತಿದ್ದಾಗ ಲಿಬಿಯಾದಲ್ಲಿ ಕುಟುಂಬವನ್ನು ಅಪಹರಿಸಲಾಗಿದೆ ಎಂದು ಮೆಹ್ಸಾನಾ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಸೋಲಂಕಿ ಹೇಳಿದ್ದಾರೆ.
ಕುಟುಂಬವು ನವೆಂಬರ್ 29 ರಂದು ಗುಜರಾತ್‌ನ ಅಹಮದಾಬಾದ್‌ನಿಂದ ದುಬೈಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿತ್ತು. ಅಲ್ಲಿಂದ ಅವರು ಲಿಬಿಯಾದ ಬೆಂಗಾಜಿ ನಗರಕ್ಕೆ ಹೋದರು. ಅಲ್ಲಿ ಅವರನ್ನು ಪೋರ್ಚುಗಲ್‌ಗೆ ತೆರಳುವ ಮೊದಲೇ ಅಪಹರಿಸಲಾಗಿದೆ. ಘಟನೆಯ ಬಗ್ಗೆ ಮೆಹ್ಸಾನಾ ಕಲೆಕ್ಟರ್ ಎಸ್‌ಕೆ ಪ್ರಜಾಪತಿಗೆ ತಿಳಿಸಲಾಗಿದೆ ಎಂದು ಸೋಲಂಕಿ ಹೇಳಿದರು.
'ಚಾವ್ಡಾ ಅವರ ಸಹೋದರ ಪೋರ್ಚುಗಲ್‌ನಲ್ಲಿ ನೆಲೆಸಿದ್ದಾರೆ ಮತ್ತು ಹೀಗಾಗಿ ಅವರು ಪೋರ್ಚುಗಲ್‌ನಲ್ಲಿರುವ ಏಜೆಂಟ್ ಸಹಾಯದಿಂದ ಪ್ರಯಾಣಿಸುತ್ತಿದ್ದರು. ಕುಟುಂಬವು ಯುರೋಪಿಯನ್ ರಾಷ್ಟ್ರದಲ್ಲಿಯೇ ನೆಲೆಸುವ ಉದ್ದೇಶದಿಂದ ಪ್ರಯಾಣಿಸುತ್ತಿತ್ತು ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಏಜೆಂಟ್‌ಗಳು ಭಾರತೀಯರಲ್ಲ” ಎಂದು ಸೋಲಂಕಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಕುಟುಂಬವನ್ನು ಅಪಹರಿಸಿದ ನಂತರ, ಅಪಹರಣಕಾರರು ಮೆಹ್ಸಾನಾದಲ್ಲಿರುವ ಅವರ ಸಂಬಂಧಿಕರನ್ನು ಸಂಪರ್ಕಿಸಿ ₹2 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ. ನಂತರ ಸಂಬಂಧಿಕರು ಶುಕ್ರವಾರ ಸಹಾಯಕ್ಕಾಗಿ ಜಿಲ್ಲಾಧಿಕಾರಿ ಎಸ್‌ಕೆ ಪ್ರಜಾಪತಿ ಅವರನ್ನು ಸಂಪರ್ಕಿಸಿದ್ದಾರೆ. ಅಪಹರಣದ ಬಗ್ಗೆ ರಾಜ್ಯ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.
Advertisement