

ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ 17 ವರ್ಷಗಳ ಜೈಲು ಶಿಕ್ಷೆಗೊಳಗಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿಭಟನೆಗೆ ಸಜ್ಜಾಗುವಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ಸ್ಥಳೀಯ ನ್ಯಾಯಾಲಯವೊಂದು ಶನಿವಾರ ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 73 ವರ್ಷದ ಇಮ್ರಾನ್ ಖಾನ್ ಆಗಸ್ಟ್ 2023 ರಿಂದ ಜೈಲಿನಲ್ಲಿದ್ದಾರೆ. ಏಪ್ರಿಲ್ 2022 ರಲ್ಲಿ ಅಧಿಕಾರದಿಂದ ಉಚ್ಚಾಟಿಸಿದ ನಂತರ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ತೋಷಖಾನಾ 2 ಪ್ರಕರಣದಲ್ಲಿ (Toshakhana 2) 2021 ರಲ್ಲಿ ಸೌದಿ ಸರ್ಕಾರದಿಂದ ದಂಪತಿಗಳು ಪಡೆದ ರಾಜ್ಯ ಉಡುಗೊರೆಗಳಲ್ಲಿ ವಂಚನೆ ಸೇರಿದೆ.
ಮಧ್ಯರಾತ್ರಿಯಲ್ಲಿ ಇಮ್ರಾನ್ ಖಾನ್ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಪ್ರಕಾರ, "ಮಿಲಿಟರಿ-ಶೈಲಿಯ ವಿಚಾರಣೆಯ ನಿರ್ಧಾರ" ದ ನಂತರ ಅಡಿಯಾಲಾ ಜೈಲಿನಲ್ಲಿ ತಮ್ಮ ವಕೀಲರೊಂದಿಗಿನ ಸಂಭಾಷಣೆ ವೇಳೆ, ದೇಶಾದ್ಯಂತ ಪ್ರತಿಭಟನೆಗೆ ಸಜ್ಜಾಗುವಂತೆ ತನ್ನ ಬೆಂಬಲಿಗರಿಗೆ ಹೇಳಿರುವುದಾಗಿ ವರದಿಯಾಗಿದೆ. ಆದರೆ, ಜೈಲಿನಲ್ಲಿ ಖಾನ್ ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ ಅವಕಾಶವಿಲ್ಲದ ಕಾರಣ ಅವರ ವೈಯಕ್ತಿಕ ಖಾತೆಯಲ್ಲಿ ಸಂಭಾಷಣೆಯನ್ನು ಯಾರು ಪೋಸ್ಟ್ ಮಾಡಿದ್ದಾರೆ ಎಂಬುದು ತಿಳಿದಿಲ್ಲ.
ಬೀದಿಗಿಳಿದು ಹೋರಾಟ ನಡೆಸಲು ಸಜ್ಜಾಗುವಂತೆ ಖೈಬರ್ ಪಖ್ತುನ್ಖ್ವಾ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿಗೆ ಸಂದೇಶವನ್ನು ಕಳುಹಿಸಿದ್ದೇನೆ. ಇಡೀ ರಾಷ್ಟ್ರ ಅದರ ಹಕ್ಕುಗಳಿಗಾಗಿ ಎದ್ದು ನಿಲ್ಲಬೇಕಾಗಿದೆ. ಹೋರಾಟವು ಪೂಜೆಯಾಗಿದೆ ಮತ್ತು ಪಾಕಿಸ್ತಾನದ ನಿಜವಾದ ಸ್ವಾತಂತ್ರ್ಯಕ್ಕಾಗಿ ಹುತಾತ್ಮನಾಗಲು ಕೂಡಾ ಸಿದ್ದನಿದ್ದೇನೆ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ಶಿಕ್ಷೆಯು ಆಶ್ಚರ್ಯಕರವಾಗಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದು, ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್‌ಗೆ ತೆರಳಲು ತಮ್ಮ ಕಾನೂನು ತಂಡವನ್ನು ಕೇಳಿಕೊಂಡಿದ್ದಾರೆ.
ಕಳೆದ ಮೂರು ವರ್ಷಗಳ ಆಧಾರರಹಿತ ನಿರ್ಧಾರಗಳು ಮತ್ತು ಶಿಕ್ಷೆಗಳಂತೆ, ತೋಷಖಾನಾ-II ನಿರ್ಧಾರವೂ ನನಗೆ ಹೊಸದೇನಲ್ಲ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಮತ್ತು ಕಾನೂನು ಅವಶ್ಯಕತೆಗಳನ್ನು ಪೂರೈಸದೆ ನ್ಯಾಯಾಧೀಶರು ತರಾತುರಿಯಲ್ಲಿ ಈ ನಿರ್ಧಾರವನ್ನು ನೀಡಿದ್ದಾರೆ. ಕಾನೂನಿನ ಪರಮಾಧಿಕಾರ ಮತ್ತು ಸಂವಿಧಾನವನ್ನು ಮರುಸ್ಥಾಪಿಸುವ ಹೋರಾಟಕ್ಕೆ ನ್ಯಾಯಾಧೀಶರು ಮತ್ತು ವಕೀಲರು ಮುಂದೆ ಬರುವುದು ಅಗತ್ಯವಾಗಿದೆ. ನ್ಯಾಯ ವ್ಯವಸ್ಥೆ ಮಾತ್ರ ಜನರನ್ನು ರಕ್ಷಿಸುತ್ತದೆ. ಇಲ್ಲದೆ ಹೋದರೆ ಆರ್ಥಿಕ ಪ್ರಗತಿಯಾಗಲೀ, ನೈತಿಕ ಬೆಳವಣಿಗೆಯಾಗಲೀ ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
Advertisement