

ಫ್ಲೋರಿಡಾ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಭಾನುವಾರ ಫ್ಲೋರಿಡಾದ ಪಾಮ್ ಬೀಚ್‌ನಲ್ಲಿ ಸಭೆ ನಡೆಸಿದ್ದಾರೆ.
ಉಕ್ರೇನ್‌ಗಾಗಿ 20 ಅಂಶಗಳ ಶಾಂತಿ ಪ್ರಸ್ತಾವನೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮಗೆ ಮಾಹಿತಿ ನೀಡಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ಹೇಳಿದ್ದಾರೆ. ಅಲ್ಲದೆ ಈ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಟ್ರಂಪ್ ಚರ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪಾಮ್ ಬೀಚ್‌ನಲ್ಲಿರುವ ಅಮೆರಿಕ ಅಧ್ಯಕ್ಷರ ಮಾರ್-ಎ-ಲಾಗೊ ಕ್ಲಬ್‌ನಲ್ಲಿ ಟ್ರಂಪ್ ಅವರನ್ನು ಭೇಟಿಯಾದ ನಂತರ ಝೆಲೆನ್ಸ್ಕಿ, ಯುದ್ಧವನ್ನು ಕೊನೆಗೊಳಿಸುವ ಸಂಭಾವ್ಯ ಮಾರ್ಗಗಳ ಕುರಿತು ಇಬ್ಬರೂ ಚರ್ಚಿಸಿರುವುದಾಗಿ ಹೇಳಿದ್ದಾರೆ.
ಸಭೆಯಲ್ಲಿ, ಮುಂದಿನ 50 ವರ್ಷಗಳವರೆಗೆ ವಿಸ್ತರಿಸುವ ದೀರ್ಘಾವಧಿಯ ಭದ್ರತಾ ಖಾತರಿ ನೀಡುವಂತೆ ಅಮೆರಿಕ ಅಧ್ಯಕ್ಷರಿಗೆ ಒತ್ತಾಯಿಸಿರುವುದಾಗಿ ಝೆಲೆನ್ಸ್ಕಿ ತಿಳಿಸಿದ್ದಾರೆ.
ಏತನ್ಮಧ್ಯೆ, ಟ್ರಂಪ್ ಭಾನುವಾರ ಇದೊಂದು 'ಅದ್ಭುತ' ಸಭೆ ಮತ್ತು ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಪುಟಿನ್ ಅವರೊಂದಿಗೆ 'ಅತ್ಯುತ್ತಮ' ಫೋನ್ ಸಂಭಾಷಣೆ ನಡೆಸಿದ್ದೇನೆ ಎಂದು ಹೇಳಿದ್ದರು.
ಉಕ್ರೇನ್ ಮತ್ತು ರಷ್ಯಾ ನಡುವೆ ಮಾತುಕತೆಯ ಮೂಲಕ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಅಮೆರಿಕ ಅಧ್ಯಕ್ಷರ ಪ್ರಯತ್ನಗಳ ಭಾಗವಾಗಿ ಟ್ರಂಪ್ ಅವರು ಜೆಲೆನ್ಸ್ಕಿ ಅವರನ್ನು ತಮ್ಮ ಖಾಸಗಿ ಕ್ಲಬ್‌ಗೆ ಆಹ್ವಾನಿಸಿದ್ದರು.
ಪ್ರಸ್ತಾವಿತ ಶಾಂತಿ ಚೌಕಟ್ಟಿನ ಕುರಿತು ಕೈವ್‌ನ ನಿಲುವನ್ನು ವಿವರಿಸುತ್ತಾ, ಉಕ್ರೇನ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮುಂದಿನ ದಿನಗಳಲ್ಲಿ ಭೇಟಿಯಾಗಬೇಕೆಂದು ಝೆಲೆನ್ಸ್ಕಿ ಹೇಳಿದರು.
ರಷ್ಯಾದೊಂದಿಗೆ ಉಕ್ರೇನ್ ಎಲ್ಲಾ ರೀತಿಯ ಮಾತುಕತೆಗೆ ಮುಕ್ತವಾಗಿದೆ. ಆದರೆ ಶಾಂತಿ ಯೋಜನೆಗೆ ಉಕ್ರೇನ್, ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಯುರೋಪ್ ಸಹಿ ಹಾಕಬೇಕು ಮತ್ತು ಅದರ ಅನುಷ್ಠಾನಕ್ಕೆ ತಾಂತ್ರಿಕ ತಂಡ ಅಗತ್ಯವಾಗಬಹುದು ಎಂದು ಝೆಲೆನ್ಸ್ಕಿ ಹೇಳಿದರು.
Advertisement