
ನವದೆಹಲಿ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭಿಸಿದ ಟ್ರೇಡ್ ವಾರ್ ನ ಪರಿಣಾಮವಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ತೀವ್ರ ಕುಸಿತ ಕಂಡಿದೆ.
ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಪ್ರತಿ ಡಾಲರ್ ಗೆ 87.29 ರೂಪಾಯಿಗಳಷ್ಟಿತ್ತು. ದಿನಾಂತ್ಯದ ವೇಳೆಗೆ ಇದು 87.185 ರೂಪಾಯಿಗಳಿಗೆ ತಲುಪಿತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಅತಿದೊಡ್ಡ ವ್ಯಾಪಾರ ಪಾಲುದಾರರಾದ ಚೀನಾ, ಮೆಕ್ಸಿಕೊ ಮತ್ತು ಕೆನಡಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ದಂಡನಾತ್ಮಕ ಸುಂಕಗಳನ್ನು ವಿಧಿಸಿದ್ದಾರೆ. ಪರಿಣಾಮ ಜಾಗತಿಕ ಹಣಕಾಸು ಮಾರುಕಟ್ಟೆಗಳು ಅಲುಗಾಡಿದ್ದು, ವ್ಯಾಪಾರ ಯುದ್ಧದ ಭಯವನ್ನು ಹೆಚ್ಚಿಸಿದೆ. ಈ ಬೆಳವಣಿಗೆಗಳಿಂದಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದೆ.
ರೂಪಾಯಿ ಮೌಲ್ಯ ಮೇಲೆತ್ತಲು ಶತಕೋಟಿ ಡಾಲರ್‌ಗಳನ್ನು ಮಾರಾಟ ಮಾಡಿರುವ ರಿಸರ್ವ್ ಬ್ಯಾಂಕ್ ನ ಪ್ರಯತ್ನಗಳ ನಡುವೆಯೂ ಅಕ್ಟೋಬರ್‌ನಿಂದ ರೂಪಾಯಿ ಮೌಲ್ಯ ಶೇಕಡಾ 4 ಕ್ಕಿಂತ ಹೆಚ್ಚು ಕುಸಿದಿದೆ.
ಈ ಬಾರಿಯ ಕುಸಿತ ಜನವರಿ 13ರ ನಂತರದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಮಾಣದ ಕುಸಿತವಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಭಾರಿ ಡಾಲರ್ ಮಾರಾಟ ಮಾಡಿದ್ದರಿಂದ ದುರ್ಬಲ ಚೇತರಿಕೆ ಕಂಡುಬಂದಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಅಕ್ಟೋಬರ್‌ನಿಂದ ಕೇಂದ್ರ ಬ್ಯಾಂಕ್ ರೂಪಾಯಿ ಮೌಲ್ಯ ಕುಸಿತ ತಡೆಗೆ $100 ಶತಕೋಟಿಗಿಂತ ಹೆಚ್ಚು ಮೌಲ್ಯದ ಡಾಲರ್‌ಗಳನ್ನು ಮಾರಾಟ ಮಾಡಿದೆ ಆದರೆ ಹೆಚ್ಚಿನ ಯಶಸ್ಸನ್ನು ಗಳಿಸಿಲ್ಲ.
Advertisement