Greece: Viral ದ್ವೀಪದಲ್ಲಿ 3 ದಿನಕ್ಕೆ 200ಕ್ಕೂ ಹೆಚ್ಚು ಬಾರಿ ಭೂಕಂಪನ!
ಅಥೆನ್ಸ್: ಗ್ರೀಸ್ ನ ವಿಶ್ವ ವಿಖ್ಯಾತ ವೈರಲ್ ದ್ವೀಪದಲ್ಲಿ ಕಳೆದ 3 ದಿನದಲ್ಲಿ ಬರೊಬ್ಬರಿ 200ಕ್ಕೂ ಅಧಿಕ ಭೂಕಂಪನಗಳು ಸಂಭವಿಸಿದೆ..
ಹೌದು.. ಇನ್ ಸ್ಟಾಗ್ರಾಮ್ ವಿಡಿಯೋಗಳಲ್ಲಿ ವ್ಯಾಪಕ ವೈರಲ್ ಆಗಿರುವ ಗ್ರೀಸ್ ನ ಸ್ಯಾಂಟೊರಿನಿ ದ್ವೀಪದಲ್ಲಿ ಕಳೆದ ಮೂರು ದಿನದಲ್ಲಿ ಬರೊಬ್ಬರಿ 200ಕ್ಕೂ ಅಧಿಕ ಬಾರಿ ಭೂಮಿ ನಡುಗಿದೆ. ಸೋಮವಾರ ಮಧ್ಯಾಹ್ನ ಇಲ್ಲಿ ಅತೀ ದೊಡ್ಡ ಅಂದರೆ 5.1 ತೀವ್ರತೆಯಲ್ಲಿ ಅತ್ಯಂತ ದೊಡ್ಡ ಭೂಕಂಪ ದಾಖಲಾಗಿತ್ತು. ಇದಾದ ಬಳಿಕ ಈ ವರೆಗೂ ಇಲ್ಲಿ ಸುಮಾರು 200ಕ್ಕೂ ಅಧಿಕ ಲಘ ಕಂಪನಗಳು ವರದಿಯಾಗಿವೆ.
ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರದ (EMSC) ದಾಖಲೆಗಳು ಮಂಗಳವಾರ ಬೆಳಿಗ್ಗೆ 7 ಗಂಟೆಯ ಹೊತ್ತಿಗೆ (05:00 GMT) ಕೆಲವು ನಿಮಿಷಗಳ ಅಂತರದಲ್ಲಿ ಹಲವು ಭೂಕಂಪಗಳು ಸಂಭವಿಸುತ್ತಿವೆ ಎಂದು ತೋರಿಸಿವೆ. ಮುಂಜಾಗ್ರತಾ ಕ್ರಮವಾಗಿ ಗುಡ್ಡಗಾಡು ಪ್ರದೇಶಗಳಲ್ಲಿದ್ದ ನಿವಾಸಿಗಳು ವಿಶೇಷ ವಿಮಾನಗಳ ಮೂಲಕ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸ್ಯಾಂಟೊರಿನಿ ಮತ್ತು ನೆರೆಯ ಅನಾಫಿ, ಅಯೋಸ್ ಮತ್ತು ಅಮೋರ್ಗೋಸ್ ದ್ವೀಪಗಳಲ್ಲಿನ ನಿವಾಸಿಗಳನ್ನು ಬೋಟ್ ಗಳು ಮತ್ತು ವಿಮಾನಗಳಲ್ಲಿ ತುಂಬಿಸಿ ಸ್ಖಳಾಂತರ ಮಾಡಲಾಗಿದೆ.
ಭೂಕಂಪಗಳು ಇಲ್ಲಿಯವರೆಗೆ ಕನಿಷ್ಠ ಹಾನಿಯನ್ನುಂಟು ಮಾಡಿವೆ ಮತ್ತು ಯಾವುದೇ ಗಾಯಗಳನ್ನು ಉಂಟುಮಾಡಿಲ್ಲ. ಆದರೆ ಇದು ದೊಡ್ಡ ಭೂಕಂಪ ಬರುತ್ತಿದೆ ಎಂದು ಸೂಚಿಸುತ್ತಿದೆಯೇ ಎಂಬ ಭಯವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಂಪನಗಳ ಸಂಖ್ಯೆ ಹೆಚ್ಚಾಗಿದೆ, ಪ್ರಮಾಣ ಹೆಚ್ಚಾಗಿದೆ ಮತ್ತು ಕೇಂದ್ರಬಿಂದುಗಳು ಈಶಾನ್ಯಕ್ಕೆ ಸ್ಥಳಾಂತರಗೊಂಡಿವೆ. ಇವು ಜ್ವಾಲಾಮುಖಿಯಲ್ಲ, ಟೆಕ್ಟೋನಿಕ್ ಭೂಕಂಪಗಳಾಗಿದ್ದರೂ, ಅಪಾಯದ ಮಟ್ಟ ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಇನ್ ಸ್ಟಾಗ್ರಾಮ್ ವೈರಲ್ ದ್ವೀಪ
ಇನ್ನು ಈ ಸ್ಯಾಂಟೊರಿನಿ ದ್ವೀಪ ಇನ್ ಸ್ಟಾಗ್ರಾಮ್ ನಲ್ಲಿ ವ್ಯಾಪಕ ವೈರಲ್ ಆಗಿತ್ತು. ಸುಂದರವಾದ ಅರ್ಧಚಂದ್ರಾಕಾರದ ಸ್ಯಾಂಟೊರಿನಿ ದ್ವೀಪವು ಸುಪ್ತ ಜ್ವಾಲಾಮುಖಿಗೆ ನೆಲೆಯಾಗಿದೆ. ಕ್ರಿ.ಪೂ. 1620 ರಲ್ಲಿ ಇಲ್ಲಿ ಮಾನವ ಇತಿಹಾಸದ ಅತಿದೊಡ್ಡ ಬೃಹತ್ ಜ್ವಾಲಾಮುಖಿ ಸ್ಫೋಟಗೊಂಡಿತ್ತು. ಅಂದು ಸ್ಫೋಟಗೊಂಡ ಲಾವಾರಸದ ಶಿಲೆಗಳೇ ಇಂದು ಸ್ಯಾಂಟರಿನೋ ದ್ವೀಪದಲ್ಲಿ ಬೃಹತ್ ಶಿಲೆಗಳಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಸ್ಯಾಂಟೊರಿನಿ ವಾರ್ಷಿಕವಾಗಿ ಮೂರು ಮಿಲಿಯನ್‌ಗಿಂತಲೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಇದೇ ಕಾರಣಕ್ಕೆ ಇಲ್ಲಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚು. ಈ ಸ್ಯಾಂಟೊರಿನಿ ದ್ವೀಪ ವಾರ್ಷಿಕವಾಗಿ ಮೂರು ಮಿಲಿಯನ್‌ಗಿಂತಲೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಸರ್ಕಾರದ ಪ್ರಮುಖ ಆದಾಯಗಳಲ್ಲಿ ಈ ಸ್ಯಾಂಟೊರಿನಿ ದ್ವೀಪ ಪ್ರವಾಸೋದ್ಯಮ ಕೂಡ ಒಂದು ಎಂದು ಹೇಳಲಾಗಿದೆ.
ಪ್ರಮುಖ ಗ್ರೀಕ್ ಭೂಕಂಪಶಾಸ್ತ್ರಜ್ಞ ಗೆರಾಸಿಮೋಸ್ ಪಾಪಡೊಪೌಲೋಸ್, ಸ್ಯಾಂಟೊರಿನಿ, ಐಯೋಸ್, ಅಮೋರ್ಗೋಸ್ ಮತ್ತು ಅನಾಫಿ ದ್ವೀಪಗಳ ನಡುವೆ ಜೀವಂತ ಜ್ವಾಲಾಮುಖಿಗಳಿದ್ದು, ಸ್ಯಾಂಟೊರಿನಿ ಜ್ವಾಲಾಮುಖಿಯು ಪ್ರತಿ 20,000 ವರ್ಷಗಳಿಗೊಮ್ಮೆ ಬಹಳ ದೊಡ್ಡ ಸ್ಫೋಟಗಳನ್ನು ಉಂಟುಮಾಡುತ್ತದೆ. ಈ ಹಿಂದೆ 1950 ರಲ್ಲಿ ಅತೀ ದೊಡ್ಡ ಜ್ವಾಲಾಮುಖಿ ಸ್ಫೋಟ ಸಂಭವಿಸಿತ್ತು.