
ಯುನೋಸ್ ಐರಿಸ್: ವಿಶ್ವ ಆರೋಗ್ಯ ಸಂಸ್ಥೆಯಿಂದ(WHO) ಹೊರಬರುವುದಾಗಿ ಅರ್ಜೆಂಟೀನಾ ಘೋಷಿಸಿದೆ, ಕೋವಿಡ್ -19 ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಡವಿದೆ ಎಂದು ಆರೋಪಿಸಿದ್ದು, ಈ ನಿಟ್ಟಿನಲ್ಲಿ ಅಮೆರಿಕದ ಹೆಜ್ಜೆಯನ್ನು ಅರ್ಜೆಂಟೀನಾ ಅನುಸರಿಸಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುತ್ತಿರುವುದಾಗಿ ಘೋಷಿಸಿಕೊಂಡ ಎರಡು ವಾರಗಳ ನಂತರ ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ ಅವರ ವಕ್ತಾರರು ಈ ವಿಷಯ ತಿಳಿಸಿದ್ದಾರೆ.
ಮಿಲೀ ಅವರ ನಿರ್ಧಾರವು ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯ ನಿರ್ವಹಣೆಯನ್ನು ಆಧರಿಸಿದ್ದಾಗಿದೆ ಎಂದು ವಕ್ತಾರ ಮ್ಯಾನುಯೆಲ್ ಅಡೋರ್ನಿ ವರದಿಗಾರರಿಗೆ ತಿಳಿಸಿದರು, ಅರ್ಜೆಂಟೀನಾ ನಮ್ಮ ಸಾರ್ವಭೌಮತ್ವದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆ ಹಸ್ತಕ್ಷೇಪ ಮಾಡಲು ಅನುಮತಿಸುವುದಿಲ್ಲ ಎಂದು ಹೇಳಿದೆ.
ಈ ಕ್ರಮವು ಅರ್ಜೆಂಟೀನಾಕ್ಕೆ ಸ್ಥಳೀಯವಾಗಿ ಸಂದರ್ಭಕ್ಕೆ ಹೊಂದಿಕೊಳ್ಳುವ ನೀತಿಗಳನ್ನು ಕಾರ್ಯಗತಗೊಳಿಸಲು ಹೆಚ್ಚಿನ ಅವಕಾಶ ನೀಡುತ್ತದೆ ಮತ್ತು ಸಂಪನ್ಮೂಲಗಳ ಹೆಚ್ಚಿನ ಲಭ್ಯತೆಯನ್ನು ಖಚಿತಪಡಿಸುತ್ತದೆ ಎಂದು ಅರ್ಜೆಂಟೀನಾ ಅಧ್ಯಕ್ಷರ ವಕ್ತಾರ ಮ್ಯಾನ್ಯುಯಲ್ ಅಡೊರ್ನಿ ಹೇಳಿದ್ದಾರೆ.
ಡಬ್ಲ್ಯುಹೆಚ್ ಒ ಅಂಕಿಅಂಶಗಳ ಪ್ರಕಾರ, ಅರ್ಜೆಂಟೀನಾ 2022 ಮತ್ತು 2023 ರಲ್ಲಿ ಸಂಸ್ಥೆಗೆ ಸದಸ್ಯತ್ವ ಶುಲ್ಕದ ರೂಪದಲ್ಲಿ ಸುಮಾರು 8.75 ಮಿಲಿಯನ್ ಡಾಲರ್ ಕೊಡುಗೆ ನೀಡಿದೆ ಎಂದು ತೋರಿಸುತ್ತದೆ. ಇದು ಒಟ್ಟು ಬಜೆಟ್‌ನ ಶೇಕಡಾ 0.11ದಷ್ಟಿದೆ. 2024/25ರ ಅವಧಿಗೆ 8.25 ಮಿಲಿಯನ್ ಡಾಲರ್ ಕೊಡುಗೆ ನೀಡಲು ನಿರ್ಧರಿಸಿದೆ.
ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯ ಬಜೆಟ್‌ನ ಬಹುಪಾಲು ಸ್ವಯಂಪ್ರೇರಿತ ಕೊಡುಗೆಗಳಿಂದ ಬಂದಿದೆ ಮತ್ತು ಅರ್ಜೆಂಟೀನಾ ಇತ್ತೀಚಿನ ವರ್ಷಗಳಲ್ಲಿ ಏನನ್ನೂ ನೀಡಿಲ್ಲ. ಅರ್ಜೆಂಟೀನಾ ವಿಶ್ವ ಆರೋಗ್ಯ ಸಂಸ್ಥೆಯಿಂದ ಹಣವನ್ನು ಪಡೆಯುವುದಿಲ್ಲ, ಆದ್ದರಿಂದ ಈ ಕ್ರಮವು ದೇಶಕ್ಕೆ ಹಣ ಸಂಗ್ರಹಣೆಯಲ್ಲಿ ಯಾವುದೇ ನಷ್ಟವಾಗುವುದಿಲ್ಲ ಎಂದಿದ್ದಾರೆ.
Advertisement