
ಟೊರಂಟೋ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾ ಅಮೇರಿಕಾದ ಭಾಗವಾಗಿದ್ದು ದೇಶದ 51 ನೇ ರಾಜ್ಯ ಎಂದು ಹೇಳಿದ್ದು ಇತ್ತೀಚೆಗೆ ಭಾರಿ ಸುದ್ದಿಯಾಗಿತ್ತು.
ಡೊನಾಲ್ಡ್ ಟ್ರಂಪ್ ಹೇಳಿಕೆಯ ಬಗ್ಗೆ ಕೆನಡಾ ಪ್ರಧಾನಿ ಗೌಪ್ಯ ಸಭೆಯೊಂದರಲ್ಲಿ ಹಂಚಿಕೊಂಡ ಅಭಿಪ್ರಾಯವನ್ನು ಈಗ ಮಾಧ್ಯಮವೊಂದರ ವರದಿ ಬಹಿರಂಗಪಡಿಸಿದೆ.
ಕೆನಡಾವನ್ನು ಅಮೇರಿಕಾದ 51 ನೇ ರಾಜ್ಯವನ್ನಾಗಿ ಮಾಡುವ ಬಗ್ಗೆ ಡೊನಾಲ್ಡ್ ಟ್ರಂಪ್ ಮಾತನಾಡಿರುವುದು ವಾಸ್ತವವಾಗಿ ಗಂಭೀರ ಅಂಶವಾಗಿದ್ದು (a real thing) ಇದರ ಹಿಂದಿನ ಉದ್ದೇಶ ದೇಶದ ಶ್ರೀಮಂತ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿರುವುದಾಗಿದೆ ಎಂದು ಜಸ್ಟಿನ್ ಟ್ರುಡೊ ಹೇಳಿದ್ದಾರೆ.
ಟ್ರುಡೊ ಉದ್ಯಮಿಗಳು ಹಾಗೂ ಲೇಬರ್ ಪಕ್ಷದ ನಾಯಕರೊಂದಿಗೆ ನಡೆಸುತ್ತಿದ್ದ ಗೌಪ್ಯ ಸಭೆಯಲ್ಲಿ ನೀಡಿರುವ ಹೇಳಿಕೆ ಪ್ರಮಾದವಶಾತ್ ಧ್ವನಿವರ್ಧಕದಲ್ಲಿ ಕೇಳಿಸಿದೆ ಎಂದು ಕೆನಡಾದ ಸುದ್ದಿ ಸಂಸ್ಥೆ ಸಿಬಿಸಿ ವರದಿ ಮಾಡಿದೆ.
ದೇಶದ ಶ್ರೀಮಂತ ನೈಸರ್ಗಿಕ ಸಂಪನ್ಮೂಲಗಳನ್ನು ತಮ್ಮದಾಗಿಸಿಕೊಳ್ಳುವ ಸುಲಭ ದಾರಿ ಎಂದರೆ ನಮ್ಮ ದೇಶವನ್ನು ಅವರ ದೇಶದ ಭಾಗವನ್ನಾಗಿ ಮಾಡಿಕೊಳ್ಳುವುದಾಗಿದೆ ಎಂಬ ವಿಚಾರ ಟ್ರಂಪ್ ಮನಸ್ಸಿನಲ್ಲಿದೆ. ಅದು ವಾಸ್ತವ ಸಂಗತಿ. ಟ್ರಂಪ್ ಜೊತೆ ನನ್ನ ಮಾತುಕತೆ ವೇಳೆಯೂ.... ಎಂದು ಹೇಳುವಷ್ಟರಲ್ಲಿ ಮೈಕ್ರೋಫೋನ್ ಏಕಾ ಏಕಿ ಸ್ತಬ್ಧಗೊಂಡಿತು ಎಂದು ಮಾಧ್ಯಮದ ವರದಿ ಹೇಳಿದೆ.
"ನಮ್ಮ ಸಂಪನ್ಮೂಲಗಳ ಬಗ್ಗೆ, ನಮ್ಮಲ್ಲಿ ಏನಿದೆ ಎಂಬುದರ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ ಮತ್ತು ಅವುಗಳಿಂದ ಲಾಭ ಪಡೆಯಲು ಅವರು ಬಯಸುತ್ತಿದ್ದಾರೆ ಎಂದು ಟ್ರೂಡೊ ಹೇಳಿದ್ದಾರೆ ಎಂದು ಸಿಬಿಸಿ ವರದಿ ಹೇಳಿದೆ.
ಈ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ವಿನಂತಿಸಿದ ಹೊರತಾಗಿಯೂ ಟ್ರೂಡೊ ಅವರ ಕಚೇರಿ ತಕ್ಷಣ ಪ್ರತಿಕ್ರಿಯೆ ನೀಡಿಲ್ಲ.
ಸಾಮಾಜಿಕ ವೇದಿಕೆ X ನಲ್ಲಿನ ಪೋಸ್ಟ್‌ನಲ್ಲಿ, ಆಲ್ಬರ್ಟಾ ಫೆಡರೇಶನ್ ಆಫ್ ಲೇಬರ್‌ನ ಅಧ್ಯಕ್ಷ ಗಿಲ್ ಮೆಕ್‌ಗೋವನ್, ಟ್ರೂಡೊ ಹೇಳಿದ್ದನ್ನು ದೃಢಪಡಿಸಿದ್ದಾರೆ.
"ಹೌದು, ಟ್ರಂಪ್ ನಿಜವಾಗಿಯೂ ಬಯಸುವುದು ಫೆಂಟನಿಲ್ ಅಥವಾ ವಲಸೆ ಅಥವಾ ವ್ಯಾಪಾರ ಕೊರತೆಯ ಮೇಲೆ ಕ್ರಮವಲ್ಲ. ಟ್ರಂಪ್ ಗೆ ನಿಜವಾಗಿಯೂ ಬೇಕಿರುವುದು ಕೆನಡಾದ ಮೇಲಿನ ಪ್ರಾಬಲ್ಯ ಮತ್ತು ಅದನ್ನು ಸಂಪೂರ್ಣವಾಗಿ ಅಮೇರಿಕಾದ ಭಾಗವನ್ನಾಗಿಸುವುದು ಎಂದು ಟ್ರೂಡೊ ಹೇಳಿರುವುದನ್ನು ಎಂದು ನಾನು ದೃಢೀಕರಿಸಬಲ್ಲೆ" ಎಂದು ಮೆಕ್‌ಗೌನ್ ಬರೆದಿದ್ದಾರೆ.
ಕೆನಡಾ ಅಮೆರಿಕದ 51ನೇ ರಾಜ್ಯವಾಗಲು ಒಪ್ಪಿಕೊಂಡರೆ ಉತ್ತಮವಾಗಿರುತ್ತದೆ ಎಂದು ಟ್ರಂಪ್ ಪದೇ ಪದೇ ಹೇಳುತ್ತಿದ್ದಾರೆ.
ಮೆಕ್ಸಿಕೋ ಮತ್ತು ಕೆನಡಾದಿಂದ ಆಮದು ಮಾಡಿಕೊಳ್ಳುವ ಮೇಲೆ ಶೇ.25 ರಷ್ಟು ಸುಂಕ ವಿಧಿಸುವ ಬೆದರಿಕೆಗಳಿಗೆ 30 ದಿನಗಳ ವಿರಾಮ ನೀಡಲು ಟ್ರಂಪ್ ಒಪ್ಪಿಕೊಂಡಿದ್ದಾರೆ ಮತ್ತು ಕೆನಡಾದ ತೈಲ, ನೈಸರ್ಗಿಕ ಅನಿಲ ಮತ್ತು ವಿದ್ಯುತ್ ಮೇಲೆ ಶೇ.10 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.
Advertisement