ಮೋದಿ ಭೇಟಿ ವೇಳೆ ತಂದೆ ಜೊತೆಯಿದ್ದ Musk ಮಕ್ಕಳು- ಇದರ ಹಿಂದಿನ ಕಾರ್ಯತಂತ್ರವೇನು ಗೊತ್ತೇ?
ವಾಷಿಂಗ್ ಟನ್: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದ ವೇಳೆ, ಅಲ್ಲಿನ ಸರ್ಕಾರದ ಭಾಗವಾಗಿರುವ, ಉದ್ಯಮಿ ಎಲಾನ್ ಮಸ್ಕ್ ಅವರೊಂದಿಗೆ ಸಭೆ ನಡೆಸಿದ್ದರು.
ಈ ಸಭೆಯ ವೇಳೆ ಎಲಾನ್ ಮಸ್ಕ್ ಮಕ್ಕಳಿಗೆ ಪ್ರಧಾನಿ ಮೋದಿ ಉಡುಗೊರೆ ನೀಡಿದ್ದು, ಆ ಮಕ್ಕಳು ಮೋದಿ ಅವರನ್ನು ಮಾತನಾಡಿಸಿದ್ದು ದೊಡ್ಡ ಸುದ್ದಿಯೇ ಆಗಿತ್ತು. ಈಗ ಈ ವಿಷಯದ ಬಗ್ಗೆ ಬಿಬಿಸಿ ಮತ್ತೊಂದು ಕುತೂಹಲಕಾರಿ ವರದಿ ಪ್ರಕಟಿಸಿದೆ.
ಮೋದಿ- ಎಲಾನ್ ಮಸ್ಕ್ ತಂತ್ರಜ್ಞಾನ ಮತ್ತು ನಾವೀನ್ಯತೆ ಬಗ್ಗೆ ಚರ್ಚೆ ನಡೆಸಿದರು. ಕೇವಲ ಈ ಸಭೆಯಷ್ಟೇ ಅಲ್ಲದೇ ವಿದೇಶಿ ನಾಯಕರೊಂದಿಗಿನ ಭೇಟಿ, ಸ್ಪೇಸ್ ಎಕ್ಸ್ ಲಾಂಚ್ ನ ಕಂಟ್ರೋಲ್ ರೂಮ್ ನಂತಹ ಪ್ರಮುಖ ಸಂದರ್ಭಗಳಲ್ಲಿ ತಂದೆಯೊಂದಿಗೇ ಮಕ್ಕಳೂ ಕಾಣಿಸಿಕೊಳ್ಳುತ್ತಾರೆ.
ಮಕ್ಕಳನ್ನು ಕರೆದೊಯ್ಯುವುದೇಕೆ ಮಸ್ಕ್?
"ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಸೇರಿಸಿಕೊಳ್ಳುವುದು ರಾಜಕಾರಣಿಯ ನಡೆ ಅಥವಾ ಸಾರ್ವಜನಿಕರು ಅವರನ್ನು ಹೇಗೆ ನೋಡುತ್ತಾರೆ ಎಂಬುದರ ಬಗ್ಗೆ ಮಾನವೀಯ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವ ರಾಜಕೀಯ ನಡೆ" ಎಂದು ಬಿಬಿಸಿ ಸಂಸ್ಥೆ ಅಮೇರಿಕನ್ ವಿಶ್ವವಿದ್ಯಾಲಯದ ಸಾರ್ವಜನಿಕ ಸಂವಹನ ಪ್ರಾಧ್ಯಾಪಕ ಕರ್ಟ್ ಬ್ರಾಡ್ಡಾಕ್ ಅವರನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ.
ಉದ್ದೇಶಪೂರ್ವಕವಾಗಿಯೇ ಮಸ್ಕ್ ತಮ್ಮೊಂದಿಗೆ ಮಕ್ಕಳನ್ನು ಪ್ರಮುಖ ಸಂದರ್ಭಗಳಲ್ಲಿ ಕರೆದೊಯ್ಯುತ್ತಾರೆ ಎಂದು ಬ್ರಾಡ್ಡಾಕ್ ಹೇಳಿದ್ದಾರೆ ಈ ರೀತಿ ಮಾಡುವುದು ಮಸ್ಕ್ ಮತ್ತು ಟ್ರಂಪ್ ಇಬ್ಬರಿಗೂ ಪ್ರಯೋಜನಕಾರಿಯಾಗುತ್ತದೆ ಎಂದು ವಿಶ್ಲೇಷಿಸಿದ್ದಾರೆ.
"ಕೆಲವು ವಿಷಯಗಳೆಡೆಗೆ ಗಮನ ಸೆಳೆಯಲು, ಮತ್ತೆ ಕೆಲವು ವಿಷಯಗಳಿಂದ ಗಮನವನ್ನು ಬೇರೆಡೆ ತಿರುಗಿಸಲು ಪ್ರಯತ್ನದ ತಂತ್ರ ಇದಾಗಿರಲಿದೆ ಎಂದು ನಾನು ಭಾವಿಸುತ್ತೇನೆ" ಎಂದು ಬ್ರಾಡ್ಡಾಕ್ ಬಿಬಿಸಿಗೆ ತಿಳಿಸಿದ್ದಾರೆ.
ಐದು ಅಧ್ಯಕ್ಷೀಯ ಪ್ರಚಾರಗಳಲ್ಲಿ ಕೆಲಸ ಮಾಡಿರುವ ಮತ್ತು ಹಾರ್ವರ್ಡ್‌ನಲ್ಲಿ ಬೋಧಿಸುವ ಕಾರ್ಯತಂತ್ರದ ಸಂವಹನ ಸಲಹೆಗಾರ ಜಾನ್ ಹೇಬರ್, ಮಸ್ಕ್‌ನ ಮಕ್ಕಳು ಆಗಾಗ್ಗೆ ಕಾಣಿಸಿಕೊಳ್ಳುವುದು, ಮತ್ತು ವೈರಲ್ ಕ್ಷಣಗಳನ್ನು ಸೃಷ್ಟಿಸುವುದು ಟ್ರಂಪ್‌ಗೆ ಪ್ರಯೋಜನಕಾರಿ ಎಂದು ಬಿಬಿಸಿಗೆ ತಿಳಿಸಿದರು.
"ಟ್ರಂಪ್‌ಗೆ ಈ ವಾತಾವರಣದಲ್ಲಿ ಸೃಷ್ಟಿಯಾಗುವ ಅವ್ಯವಸ್ಥೆಯಿಂದ ಪ್ರಯೋಜನವಾಗಲಿದೆ" ಎಂದು ಹೇಬರ್ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ