
ವಾಷಿಂಗ್ಟನ್: ಸತತ ವೈಫಲ್ಯಗಳ ನಡುವೆಯೂ ತಲೆಕೆಡಿಸಿಕೊಳ್ಳದ ಅಮೆರಿಕದ ಖ್ಯಾತ ಉದ್ಯಮಿ ಎಲಾನ್ ಮಸ್ಕ್, ತಮ್ಮ ಸ್ಟಾರ್ ಶಿಪ್ರಾಕೆಟ್ ಪತನ ಕುರಿತಂತೆ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ತನ್ನ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಟಾರ್‌ಶಿಪ್ ಅನ್ನು ಪರೀಕ್ಷಿಸಿದ್ದು, ದುರಾದೃಷ್ಟವಶಾತ್ ಎಂಜಿನ್ ವೈಫಲ್ಯದಿಂದಾಗಿ ಮೇಲಕ್ಕೆ ಹೋಗುತ್ತಿದ್ದ ರಾಕೆಟ್ ಬೂಸ್ಟರ್ ಬಾಹ್ಯಾಕಾಶ ನೌಕೆಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡು ಭೂಮಿಗೆ ಅಪ್ಪಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್, 'ಯಶಸ್ಸು ಅನಿಶ್ಚಿತ, ಆದರೆ ಮನರಂಜನೆ ಖಚಿತ! ಎಂದು ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಏನಿದು ಯೋಜನೆ? ವಿಫಲವಾಗಿದ್ದೇಕೆ?
ಅಮೆರಿಕದ ಪ್ರಸಿದ್ಧ ಉದ್ಯಮಿ ಎಲೋನ್ ಮಸ್ಕ್ ಅವರ ಕಂಪನಿಯಾದ ಸ್ಪೇಸ್‌ಎಕ್ಸ್ ತನ್ನ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಟಾರ್‌ಶಿಪ್ ಅನ್ನು ಪರೀಕ್ಷಿಸಿತು. ಪರೀಕ್ಷೆಯ ಸಮಯದಲ್ಲಿ ಬೂಸ್ಟರ್ ರಾಕೆಟ್ ಪ್ಯಾಡ್‌ಗೆ ಮರಳಿತು. ಆದರೆ ಎಂಜಿನ್ ವೈಫಲ್ಯದಿಂದಾಗಿ ಮೇಲಕ್ಕೆ ಹೋಗುತ್ತಿದ್ದ ಬಾಹ್ಯಾಕಾಶ ನೌಕೆಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತು.
ಬೂಸ್ಟರ್ ರಾಕೆಟ್‌ಗಳನ್ನು ಹೆಚ್ಚುವರಿ ಒತ್ತಡವನ್ನು ಒದಗಿಸಲು ಅಂದರೆ ಬಾಹ್ಯಾಕಾಶಕ್ಕೆ ಹೋಗಲು ವೇಗವನ್ನು ಒದಗಿಸಲು ಬಳಸಲಾಗುತ್ತದೆ. ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆ ಮತ್ತು ಸೂಪರ್ ಹೆವಿ ರಾಕೆಟ್‌ಗಳನ್ನು 'ಸ್ಟಾರ್‌ಶಿಪ್' ಎಂದು ಕರೆಯಲಾಗುತ್ತದೆ. ಜನವರಿ 17 ರಂದು ಬೆಳಗ್ಗೆ 4 ಗಂಟೆಗೆ ಟೆಕ್ಸಾಸ್‌ನ ಬೊಕಾ ಚಿಕಾದಿಂದ ರಾಕೆಟ್ ಲಾಂಚ್ ಆಯಿತು. ಉಡಾವಣೆಯಾದ ಕೆಲವೇ ನಿಮಿಷಗಳ ಬಳಿಕ ಬಾಹ್ಯಾಕಾಶ ನೌಕೆ ಸ್ಫೋಟಗೊಂಡಿದೆ. ಬಾಹ್ಯಾಕಾಶ ನೌಕೆಯ ಆರು ಎಂಜಿನ್‌ಗಳು ಒಂದೊಂದಾಗಿ ತನ್ನ ಕಾರ್ಯವನ್ನು ನಿಲ್ಲಿಸತೊಡಗಿದ್ದು, ರಾಕೆಟ್ ಉಡಾವಣೆಗೊಂಡ ಎಂಟೂವರೆ ನಿಮಿಷಗಳಲ್ಲಿ ಸಂಪರ್ಕ ಕಡಿತಗೊಂಡು ಭೂಮಿಗೆ ಅಪ್ಪಳಿಸಿವೆ.
ಇಂಧನ ಸೋರಿಕೆ ಕಾರಣ
ಬಾಹ್ಯಾಕಾಶ ನೌಕೆಯ ಎಂಜಿನ್ ಫೈರ್‌ವಾಲ್‌ನಲ್ಲಿ ಆಕ್ಸಿಜನ್/ಇಂಧನ ಸೋರಿಕೆಯಾಗಿದ್ದು, ಅದು ಸ್ಫೋಟಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆ ಸೂಚಿಸಿದೆ. ಇದು ಸ್ಟಾರ್‌ಶಿಪ್‌ನ ಏಳನೇ ಪರೀಕ್ಷಾ ಹಾರಾಟವಾಗಿದ್ದು, ಭವಿಷ್ಯದಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸಲು ನಾಸಾ ಇದನ್ನು ಸಿದ್ಧಪಡಿಸುತ್ತಿದೆ. ಈ ರಾಕೆಟ್ ಭವಿಷ್ಯದಲ್ಲಿ ಮನುಷ್ಯರನ್ನು ಮಂಗಳ ಗ್ರಹಕ್ಕೆ ಕರೆದೊಯ್ಯುತ್ತದೆ ಎಂಬುದು ಮಸ್ಕ್ ಅವರ ಕನಸಾಗಿದೆ.
ಹಿಂದಿನ ಪರೀಕ್ಷಾರ್ಥ ಹಾರಾಟಗಳಂತೆ ಈ ಬಾಹ್ಯಾಕಾಶ ನೌಕೆಯು ಟೆಕ್ಸಾಸ್‌ನಿಂದ ಮೆಕ್ಸಿಕೋ ಕೊಲ್ಲಿಗೆ ಹಾರಬೇಕಿತ್ತು. ಸ್ಪೇಸ್‌ಎಕ್ಸ್ ಇದನ್ನು ಉಡಾವಣೆ ಮಾಡಲು 10 ಡಮ್ಮಿ ಸ್ಯಾಟಲೈಟ್ ಜೊತೆ ತರಬೇತಿ ಕೂಡ ನಡೆಸಿತ್ತು. ರಾಕೆಟ್‌ನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಇವುಗಳನ್ನು ಸಿದ್ಧಪಡಿಸಲಾಗಿತ್ತು. ಈ ಹೊಸ ರಾಕೆಟ್ 400 ಅಡಿ ಅಂದರೆ 123 ಮೀಟರ್ ಎತ್ತರವಿತ್ತು. ಆದರೆ ಹಾರಾಟ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.
Advertisement