
ವಾಷಿಂಗ್ಟನ್: ಅಮೆರಿಕದ ಇತಿಹಾಸದಲ್ಲಿಯೇ ಅತಿದೊಡ್ಡ ಗಡಿಪಾರು ಕಾರ್ಯಾಚರಣೆಯನ್ನು ಶೀಘ್ರದಲ್ಲಿಯೇ ಆರಂಭಿಸುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದು, ವಲಸಿಗರ ಆತಂಕ ಸೃಷ್ಟಿಸಿದೆ.
ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನಾ ವಾಷಿಂಗ್ಟನ್ ಡಿಸಿಯಲ್ಲಿ ಆಯೋಜಿಸಿದ್ದ ರ್‍ಯಾಲಿಯಲ್ಲಿ ಮಾತನಾಡಿದ ಟ್ರಂಪ್, ಈ ಹಿಂದೆ ತೆರೆದ ಗಡಿಗಳು, ಜೈಲುಗಳು, ಮಾನಸಿಕ ಸಂಸ್ಥೆಗಳ ಕುರಿತ ಯೋಚಿಸದವರೂ ಎಲ್ಲರಿಗೂ ಅಮೆರಿಕದ ಇತಿಹಾಸದಲ್ಲಿಯೇ ಅತಿದೊಡ್ಡ ಗಡಿಪಾರು ಕಾರ್ಯಾಚರಣೆ ಆರಂಭವಾಗಲಿದೆ ಎಂದರು.
ಉಕ್ರೇನ್- ರಷ್ಯಾ ನಡುವಿನ ಯುದ್ಧ, ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತು ಮೂರನೇ ವಿಶ್ವ ಸಮರ ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅವರು ವಾಗ್ದಾನ ಮಾಡಿದರು. ವಲಸಿಗರ ಬಿಕ್ಕಟ್ಟು, ಸರ್ಕಾರದ ಹೊಸ ನೀತಿಗಳು, ಗಡಿಪಾರು ಮತ್ತಿತರ ಅನೇಕ ವಿಚಾರಗಳ ಕುರಿತು ಮಾತನಾಡಿದರು.
ಅಮೆರಿಕದ ಗೌರವವನ್ನು ಮತ್ತಷ್ಟು ಹೆಚ್ಚಿಸಲಾಗುವುದು, ನಾಲ್ಕು ವರ್ಷಗಳ ಕಾಲ ಅಮೆರಿಕದ ಅಭಿವೃದ್ಧಿ ಕುಂಠಿತವಾಗಿತ್ತು. ಇದಕ್ಕೆ ಅಂತ್ಯವಾಡಿ ಅಮೆರಿಕದ ಶಕ್ತಿ, ಸೌಹಾರ್ದತೆ, ಘನತೆ ಮತ್ತು ಹೆಮ್ಮೆಯ ಹೊಸ ದಿನವನ್ನು ಆರಂಭಿಸುತ್ತೇವೆ ಎಂದು ಅವರು ಹೇಳಿದರು.
ಭ್ರಷ್ಟ ರಾಜಕೀಯ ಆಳ್ವಿಕೆಯನ್ನು ಅಂತ್ಯಗೊಳಿಸುತ್ತೇವೆ. ಅಮೆರಿಕನ್ನರ ಉದ್ಯೋಗ ಕಾಪಾಡಲು ಮತ್ತು ವ್ಯವಹಾರ ಚೀನಾಕ್ಕೆ ಹೋಗುವುದನ್ನು ತಡೆಯಲು ಶೇ. 50 ರಷ್ಟು ಪಾಲುದಾರಿಕೆಯೊಂದಿಗೆ TikTok ಉಳಿಸಲು ಒಪ್ಪಿಕೊಂಡಿರುವುದಾಗಿ ಟ್ರಂಪ್ ತಿಳಿಸಿದರು.
Advertisement