
ನವದೆಹಲಿ: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಗಂಭೀರ ಹಾಗೂ ತ್ವರಿತ ರೀತಿಯಲ್ಲಿ ವಾಪಸ್ ಕರೆಸಿಕೊಳ್ಳುವುದು ಪ್ರತಿಯೊಂದು ರಾಷ್ಟ್ರದ ಜವಾಬ್ದಾರಿಯಾಗಿದೆ ಎಂದು ಟ್ರಂಪ್ ಆಡಳಿತ ಸೋಮವಾರ ಹೇಳಿದೆ.
ಅಕ್ರಮ ವಲಸಿಗರ ವಿಚಾರದಲ್ಲಿ ತನ್ನ ಆಡಳಿತ ಇನ್ನು ಮುಂದೆ ಸುಳ್ಳು ಹೇಳುವುದಿಲ್ಲ ಅಥವಾ ರಾಜಕೀಯ ಲಾಭ ಪಡೆಯುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಕಠಿಣ ಪದಗಳಲ್ಲಿ ಹೇಳಿದ್ದಾರೆ.
ಅಕ್ರಮ ವಲಸಿಗರನ್ನು ವಾಪಸ್ ಕರೆಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೊಂಬಿಯಾದೊಂದಿಗೆ ಸಂಘರ್ಷದ ನಂತರ ರೂಬಿಯೊ ಈ ಹೇಳಿಕೆ ನೀಡಿದ್ದಾರೆ.
ಅಮೆರಿಕದಿಂದ ಕೊಲಂಬಿಯಾದ ಬೋಗೋಟಾಗೆ ಅಕ್ರಮವಾಗಿ ವಲಸಿಗರನ್ನು ಹೊತ್ತು ಭಾನುವಾರ ಬಂದಿದ್ದ 2 ವಿಮಾನಗಳನ್ನು ಇಳಿಯಲು ಕೊಲಂಬಿಯಾ ಆಡಳಿತ ಅನುಮತಿ ನೀಡಿರಲಿಲ್ಲ. ಅಲ್ಲದೇ ನಮ್ಮನ್ನು ಆಳಲು ಅಮೆರಿಕಕ್ಕೆ ಬಿಡುವುದಿಲ್ಲ ಎಂದು ಕೊಲಂಬಿಯಾ ಅಧ್ಯಕ್ಷ ಗಸ್ಟಾವೋ ಪೆಟ್ರೋ ಹೇಳಿದ್ದರು.
ಇದರ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ರೂಬಿಯೊ, ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ತಮ್ಮ ರಾಷ್ಟ್ರದ ಪ್ರಜೆಗಳನ್ನು ಗಂಭೀರ ಹಾಗೂ ತ್ವರಿತ ರೀತಿಯಲ್ಲಿ ವಾಪಸ್ ಕರೆಸಿಕೊಳ್ಳುವುದು ಪ್ರತಿಯೊಂದು ರಾಷ್ಟ್ರದ ಜವಾಬ್ದಾರಿಯಾಗಿದೆ ಎಂದು ರೂಬಿಯೊ ಹೇಳಿದ್ದಾರೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೋಮವಾರ ದೂರವಾಣಿ ಸಂಭಾಷಣೆಯಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಅಕ್ರಮ ವಲಸಿಗರ ವಾಪಸ್ ಕರೆಸಿಕೊಳ್ಳುವ ವಿಚಾರ ಬಂದಾಗ ಭಾರತ ಸರಿಯಾಗಿ ನಡೆದುಕೊಳ್ಳಲಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.
Advertisement