
ಅಕ್ರಾ: ಘಾನಾ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಘಾನಾದ 'ಅತ್ಯುನ್ನತ ನಾಗರಿಕ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ.
ಐದು ದೇಶಗಳ ಪ್ರವಾಸ ಕೈಗೊಂಡಿರುವ ಪ‍್ರಧಾನಿ ಮೋದಿ ಮೊದಲಿಗೆ ಘಾನಾಕ್ಕೆ ಬಂದಿಳಿದರು. ಘಾನಾ ಅಧ್ಯಕ್ಷ ಜಾನ್ ಡ್ರಾಮಾನಿ ಅವರೇ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಬರಮಾಡಿಕೊಂಡು, ಸ್ವಾಗತಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಘಾನಾದ 'ಅತ್ಯುನ್ನತ ನಾಗರಿಕ ಪ್ರಶಸ್ತಿ' ನೀಡಿ ಗೌರವಿಸಲಾಗಿದ್ದು, 'ವಿಶಿಷ್ಟ ರಾಜನೀತಿ ಹಾಗೂ ಜಾಗತಿಕ ಪ್ರಭಾವಿ ನಾಯಕತ್ವ'ವನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 'ದಿ ಆಫೀಸರ್ ಆಫ್ ದ ಆರ್ಡರ್ ಸ್ಟಾರ್ ಆಫ್ ಘಾನಾ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಅವರು ಬುಧವಾರ ಪ್ರಧಾನಿ ಮೋದಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು. ‘ದೇಶದ 140 ಕೋಟಿ ನಾಗರಿಕರ ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದೇನೆ’ ಎಂದು ತಿಳಿಸಿದ ಮೋದಿ ‘ಎರಡೂ ದೇಶಗಳ ಯುವಕರ ಆಕಾಂಕ್ಷೆ ಹಾಗೂ ಭವಿಷ್ಯಕ್ಕಾಗಿ ಈ ಪ್ರಶಸ್ತಿ ಅರ್ಪಿಸುತ್ತೇನೆ’ ಎಂದು ತಿಳಿಸಿದರು.
ಅಂತೆಯೇ ಇದನ್ನು ಭಾರತದ 1.4 ಬಿಲಿಯನ್ ನಾಗರಿಕರಿಗೆ, ವಿಶೇಷವಾಗಿ ಅದರ ಯುವಜನರಿಗೆ, ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳಿಗೆ ಮತ್ತು ವೈವಿಧ್ಯತೆಗೆ ಅರ್ಪಿಸುತ್ತೇನೆ ಎಂದರು.
ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಪರಸ್ಪರ ಗೌರವದ ಹಂಚಿಕೆಯ ಅಡಿಪಾಯದ ಮೇಲೆ ನಿರ್ಮಿಸಲಾದ ಭಾರತ ಮತ್ತು ಘಾನಾ ನಡುವಿನ ಆಳವಾದ ಬೇರೂರಿರುವ ಸಂಬಂಧಗಳನ್ನು ಪ್ರಧಾನಿ ಮೋದಿ ಎತ್ತಿ ತೋರಿಸಿದರು.
ಎರಡು ದಿನಗಳ ಘಾನಾ ಪ್ರವಾಸ ಮುಗಿಸಿದ ಮೋದಿ ಅವರು ಗುರುವಾರ ರಾತ್ರಿ ಟ್ರಿನಿಡಾಡ್, ಟೊಬಾಗೊ ಪ್ರವಾಸಕ್ಕೆ ತೆರಳಿದರು.
Advertisement