
ಬ್ರೆಸಿಲಿಯಾ: ಪ್ರಧಾನಿ ಮೋದಿ 17 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ತಲುಪಿದ್ದಾರೆ. ಅಲ್ಲಿ ಅವರಿಗೆ ಭಾರತೀಯ ಸಮುದಾಯ ಸೇರಿದಂತೆ ನಾಗರಿಕರಿಂದ ಭವ್ಯ ಸ್ವಾಗತ ಕೋರಲಾಯಿತು.
ಸ್ಥಳೀಯ ಕಾಲಮಾನ ನಿನ್ನೆ ಶನಿವಾರ ಸಂಜೆ ಗಲಿಯಾವೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಆಗಮಿಸಿದಾಗ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಯಿತು. ಬ್ರೆಜಿಲಿಯನ್ ಮ್ಯೂಸಿಕ್ ಗ್ರೂಪ್ ಆಸ್ಟ್ರಾಲ್ ಲೈಟ್ ಹಾಡಿನ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರ ಆಹ್ವಾನದ ಮೇರೆಗೆ ಪ್ರಧಾನಿಯವರ ಎರಡು ಹಂತದ ಬ್ರೆಜಿಲ್ ಭೇಟಿ ಇದಾಗಿದೆ. ಈ ಭೇಟಿಯ ಸಮಯದಲ್ಲಿ, ಪ್ರಧಾನಿಯವರು ರಿಯೊದಲ್ಲಿ ನಡೆಯುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ರಾಜಧಾನಿ ಬ್ರೆಸಿಲಿಯಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಬಂದಿಳಿದಿದ್ದೇನೆ, ಅಲ್ಲಿ ನಾನು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತೇನೆ ಮತ್ತು ನಂತರ ಅಧ್ಯಕ್ಷ ಲುಲಾ ಅವರ ಆಹ್ವಾನದ ಮೇರೆಗೆ ಅವರ ರಾಜಧಾನಿ ಬ್ರಾಸ್ಲಿಯಾಗೆ ರಾಜ್ಯ ಭೇಟಿಗಾಗಿ ಹೋಗುತ್ತೇನೆ. ಈ ಫಲಪ್ರದ ಮಾತುಕತೆ ನಡೆಸುವ ಆಶಾಭಾವನೆಯಲ್ಲಿದ್ದೇನೆ ಎಂದು ಮೋದಿ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಬ್ರಿಕ್ಸ್ ಪಾಲುದಾರಿಕೆಗೆ ಬದ್ಧ, ಪ್ರಧಾನಿ ನರೇಂದ್ರ ಮೋದಿ ಅವರು 17 ನೇ ಬ್ರಿಕ್ಸ್ ಶೃಂಗಸಭೆಗಾಗಿ ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಬಂದಿಳಿಯುತ್ತಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಬ್ರೆಸಿಲಿಯಾದಲ್ಲಿ, ಪ್ರಧಾನಿ ಮೋದಿ ಅವರು ಅಧ್ಯಕ್ಷ ಲೂಲಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಭಾರತ ಮತ್ತು ಬ್ರೆಜಿಲ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದು ಇದರ ಉದ್ದೇಶವಾಗಿದೆ. ಈ ಪಾಲುದಾರಿಕೆಯು ವ್ಯಾಪಾರ, ರಕ್ಷಣೆ, ಇಂಧನ, ಬಾಹ್ಯಾಕಾಶ, ತಂತ್ರಜ್ಞಾನ, ಕೃಷಿ, ಆರೋಗ್ಯ ಮತ್ತು ಜನರಿಂದ ಜನರಿಗೆ ಸಂಬಂಧಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ವಿಸ್ತರಣೆಯ ಮೇಲೆ ಕೇಂದ್ರೀಕರಿಸುತ್ತದೆ. ಎರಡೂ ದೇಶಗಳ ನಡುವಿನ ಹೆಚ್ಚುತ್ತಿರುವ ಸಹಕಾರದ ದೃಷ್ಟಿಯಿಂದ ಈ ಸಭೆಯನ್ನು ಮಹತ್ವದ್ದಾಗಿ ಪರಿಗಣಿಸಲಾಗಿದೆ.
ಭಾರತೀಯ ಸಮುದಾಯದ ಸದಸ್ಯರಿಂದ "ಭಾರತ್ ಮಾತಾ ಕಿ ಜೈ" ಘೋಷಣೆಗಳು ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದವು, ಅವರನ್ನು ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸ್ವಾಗತಿಸಲಾಯಿತು.
ಪ್ರಧಾನ ಮಂತ್ರಿಯವರು ಅರ್ಜೆಂಟೀನಾದಿಂದ ಬ್ರೆಜಿಲ್ ಗೆ ಆಗಮಿಸಿದರು, ಅಲ್ಲಿ ಅವರು ಅಧ್ಯಕ್ಷ ಜೇವಿಯರ್ ಮಿಲಿ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಿದ್ದರು. ದ್ವಿಮುಖ ವ್ಯಾಪಾರವನ್ನು ವೈವಿಧ್ಯಗೊಳಿಸಲು ಮತ್ತು ರಕ್ಷಣೆ, ನಿರ್ಣಾಯಕ ಖನಿಜಗಳು, ಔಷಧೀಯ, ಇಂಧನ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಪರಸ್ಪರ ಒಪ್ಪಿಕೊಂಡಿದ್ದರು.
ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಇಂದು ಮತ್ತು ನಾಳೆ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ, ನಂತರ ಅವರು ಬ್ರೆಸಿಲಿಯಾಕ್ಕೆ ಭೇಟಿ ನೀಡಲಿದ್ದಾರೆ. ಸುಮಾರು ಆರು ದಶಕಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ದೇಶಕ್ಕೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿರುವ ಬ್ರಿಕ್ಸ್ ನ್ನು ಐದು ಹೆಚ್ಚುವರಿ ಸದಸ್ಯ ರಾಷ್ಟ್ರಗಳಾದ ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇಯೊಂದಿಗೆ ವಿಸ್ತರಿಸಲಾಗಿದೆ.
Advertisement