
ಇಸ್ಲಾಮಾಬಾದ್: ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರನ್ನು ಪದಚ್ಯುತಗೊಳಿಸಿ, ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು ಅಧ್ಯಕ್ಷನಾಗಲು ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎನ್ನುವ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಇಂತಹ ಸಂದೇಶಗಳನ್ನು ಬಲವಾಗಿ ನಿರಾಕರಿಸಿರುವ ಪ್ರಧಾನಿ ಶೆಹಬಾಜ್ ಶರೀಫ್, ಅಂತಹ ಹೇಳಿಕೆಗಳು ಕೇವಲ ವದಂತಿಗಳಷ್ಟೇ ಎಂದಿದ್ದಾರೆ.ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅಧ್ಯಕ್ಷರಾಗುವ ಯಾವುದೇ ಇಚ್ಛೆಯನ್ನು ವ್ಯಕ್ತಪಡಿಸಿಲ್ಲ ಅಥವಾ ಅಂತಹ ಯಾವುದೇ ಯೋಜನೆಯೂ ಇಲ್ಲ ಎಂದು ಶರೀಫ್ ದಿ ನ್ಯೂಸ್‌ಗೆ ತಿಳಿಸಿದ್ದಾರೆ.
ಜರ್ದಾರಿ, ಮುನೀರ್ ಅವರು ಪರಸ್ಪರ ಗೌರವ ಹೊಂದಿದ್ದಾರೆ. ಅಲ್ಲದೇ ಪಾಕಿಸ್ತಾನದ ಪ್ರಗತಿ ಮತ್ತು ಸಮೃದ್ಧಿಯ ಗುರಿ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಧ್ಯಕ್ಷ ಜರ್ದಾರಿ, ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥರನ್ನು ಗುರಿಯಾಗಿಸಿ ಈ ಅಪ ಪ್ರಚಾರ ಯಾರು ಮಾಡುತ್ತಿದ್ದಾರೆ ಎಂದು ನಮಗೆ ಸಂಪೂರ್ಣವಾಗಿ ತಿಳಿದಿದೆ ಎಂದು ಗೃಹ ಸಚಿವ ಮೋನಿಶ್ ನಖ್ವಿ ಗುರುವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿದ್ದರು. ಈ ಹೇಳಿಕೆ ಹಿನ್ನೆಲೆಯಲ್ಲಿ ಶರೀಫ್ ಅವರು ಪ್ರತಿಕ್ರಿಯಿಸಿದ್ದಾರೆ.
ಅಧ್ಯಕ್ಷರನ್ನು ರಾಜೀನಾಮೆ ಕೇಳುವ ಬಗ್ಗೆ ಅಥವಾ COAS ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ಆಕಾಂಕ್ಷಿಯಾಗುವುದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಅಥವಾ ಅಂತಹ ಯಾವುದೇ ಆಲೋಚನೆ ಅಸ್ತಿತ್ವದಲ್ಲಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಅವರು ಹೇಳಿದರು.
ಮುನೀರ್ ಅವರನ್ನು ಮೂರು ವರ್ಷಗಳ ಅವಧಿಗೆ 2022 ರಲ್ಲಿ ಸೇನಾ ಮುಖ್ಯಸ್ಥರ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಆದರೆ ಕಳೆದ ವರ್ಷ ಅವರ ಅವಧಿಯನ್ನು ಐದು ವರ್ಷಕ್ಕೆ ಸರ್ಕಾರ ವಿಸ್ತರಿಸಿತ್ತು. ಅವರನ್ನು ಮತ್ತೊಂದು ಅವಧಿ ವಿಸ್ತರಿಸುವ ಸಾಧ್ಯತೆಯೂ ಇದೆ.
ಪ್ರಧಾನಿ ಹುದ್ದೆಗೆ ಷರೀಫ್ ಅವರ ಹೆಸರನ್ನು ಬೆಂಬಲಿಸಿದ್ದಕ್ಕಾಗಿ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಜರ್ದಾರಿ ಕಳೆದ ವರ್ಷ ಆಯ್ಕೆಯಾಗಿದ್ದರು. ಜರ್ದಾರಿ ಮತ್ತು ಅವರ ಪುತ್ರ ಬಿಲಾವಲ್ ಭುಟ್ಟೋ ಜರ್ದಾರಿ ಇಬ್ಬರೂ ಸರ್ಕಾರದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.
ಬಿಲಾವಲ್ ಇತ್ತೀಚಿನ ಭಾರತ-ಪಾಕಿಸ್ತಾನ ಸೇನಾ ಸಂಘರ್ಷ ಕುರಿತು ವಿವರಿಸಲು ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡಿದ ನಿಯೋಗದ ನೇತೃತ್ವ ವಹಿಸಿದ್ದರು. ಇದು ಅಧಿಕಾರದ ವಲಯದಲ್ಲಿ ಅವರು ಹೊಂದಿರುವ ನಂಬಿಕೆಯನ್ನು ತೋರಿಸುತ್ತದೆ ಎಂದು ರಾಜಕೀಯ ವೀಕ್ಷಕರು ಹೇಳಿದ್ದಾರೆ.
Advertisement