
ಕರಾಚಿ: ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭಾರತದ ಮೇಲೆ ಮತ್ತೆ ವಿಷಕಾರಿದ್ದಾರೆ. ಯಾವುದೇ ಪ್ರಚೋದನೆಯಿಲ್ಲದೆ ಭಾರತ ಎರಡು ಬಾರಿ ಪಾಕ್ ಮೇಲೆ ದಾಳಿ ಮಾಡಿದೆ ಎಂದು ಹೇಳಿದ್ದು, ಇದನ್ನು ಕಾರ್ಯತಂತ್ರದ ದೂರದೃಷ್ಟಿಯ ಕೊರತೆ ಎಂದು ಕರೆದಿದ್ದಾರೆ.
ಕರಾಚಿಯ ಪಾಕಿಸ್ತಾನ ನೌಕಾ ಅಕಾಡೆಮಿಯಲ್ಲಿ ಶನಿವಾರ ಮಾತನಾಡಿದ ಮುನೀರ್, ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಳಕ್ಕೆ ಭಾರತವನ್ನು ದೂಷಿಸಿದ್ದು, ಭಾರತದ ಯಾವುದೇ ಆಕ್ರಮಣಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಶಪಥ ಮಾಡಿದ್ದಾರೆ.
ಪಾಕಿಸ್ತಾನವನ್ನು ನಿವ್ವಳ ಪ್ರಾದೇಶಿಕ ಸ್ಥಿರೀಕಾರಕ ಎಂದು ಕರೆದಿದ್ದು, ಇಸ್ಲಾಮಾಬಾದ್ ಪ್ರಚೋದಿತವಲ್ಲದ ಭಾರತೀಯ ಮಿಲಿಟರಿ ಆಕ್ರಮಣಕ್ಕೆ ದೃಢವಾಗಿ ಪ್ರತಿಕ್ರಿಯಿಸಿದೆ. ಪ್ರಚೋದನೆಗಳ ಹೊರತಾಗಿಯೂ, ಪಾಕಿಸ್ತಾನ ಸಂಯಮ ಮತ್ತು ಪ್ರಬುದ್ಧತೆಯನ್ನು ಪ್ರದರ್ಶಿಸಿತು. ಪ್ರಾದೇಶಿಕ ಶಾಂತಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು ಎಂದು ಹೇಳಿದರು.
ಪಾಕಿಸ್ತಾನ ಭಯೋತ್ಪಾದನೆ ನಿರ್ಮೂಲನೆಗೆ ಹತ್ತಿರವಾಗುತ್ತಿದ್ದಂತೆಯೇ ಭಾರತ ಈ ಪ್ರದೇಶದಲ್ಲಿ ಉದ್ದೇಶಪೂರ್ವಕವಾಗಿ ಉದ್ವಿಗ್ನತೆಯನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ಮುನೀರ್, ಇಂತಹ ಸಮಯದಲ್ಲಿ ಭಾರತದ ಅಕ್ರಮ ಆಕ್ರಮಣದ ವಿರುದ್ಧ ಹೋರಾಡುತ್ತಿರುವ ನಮ್ಮ ಕಾಶ್ಮೀರಿ ಸಹೋದರರ ತ್ಯಾಗಗಳನ್ನು ನಾವು ನೆನಪಿಸಿಕೊಳ್ಳಬೇಕು ಎಂದರು.
ವಿಶ್ವಸಂಸ್ಥೆಯ ನಿರ್ಣಯಗಳು ಮತ್ತು ಕಾಶ್ಮೀರಿ ಜನರ ಆಕಾಂಕ್ಷೆಗಳಿಗೆ ಅನುಗುಣವಾಗಿ ಕಾಶ್ಮೀರ ಸಮಸ್ಯೆಯ ನ್ಯಾಯಯುತ ಪರಿಹಾರ ಪಾಕಿಸ್ತಾನದ ಪ್ರಬಲ ವಾದವಾಗಿದೆ ಎಂದು ಹೇಳಿದರು.
ಪಾಕಿಸ್ತಾನ ಬೆಂಬಲಿತ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕೆಲವು ದಿನಗಳ ಮೊದಲು, ಕಾಶ್ಮೀರ ನಮ್ಮ ಕಂಠನಾಳ; ಅದು ನಮ್ಮ ಕಂಠನಾಳವಾಗಿಯೇ ಉಳಿಯುತ್ತದೆ. ನಾವು ಅದನ್ನು ಮರೆಯುವುದಿಲ್ಲ ಎಂದು ವಿದೇಶದಲ್ಲಿರುವ ಪಾಕಿಸ್ತಾನಿ ವಲಸೆಗಾರರನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಹೇಳಿದ್ದರು.
Advertisement