
ನವದೆಹಲಿ: ಕೋಲ್ಡ್‌ಪ್ಲೇ ಸಂಗೀತ ಕಚೇರಿಯಲ್ಲಿ ತನ್ನ HR ಮುಖ್ಯಸ್ಥೆ ಕ್ರಿಸ್ಟಿನ್ ಕ್ಯಾಬೋಟ್ (Kristin Cabot) ಅವರನ್ನು ಬಿಗಿದಪ್ಪಿಕೊಂಡಿದ್ದ ವೀಡಿಯೊ ವೈರಲ್ ಬೆನ್ನಲ್ಲೇ, ಡೇಟಾ ತಂತ್ರಜ್ಞಾನ ಸಂಸ್ಥೆ ಆಸ್ಟ್ರೋನೊಮರ್ (Astronomer)ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಂಡಿ ಬೈರನ್ (Andy Byron) ರಾಜಿನಾಮೆ ನೀಡಿದ್ದಾರೆ.
ಈ ಕುರಿತು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಿನ್ಸಿನಾಟಿ ಮೂಲದ ಆಸ್ಟ್ರೋನೊಮರ್ ಇಂಕ್‌ನ ಸಿಇಒ ಹುದ್ದೆಗೆ ಬೈರನ್ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.
"ನಮ್ಮ ಸ್ಥಾಪನೆಯ ನಂತರ ನಮಗೆ ಮಾರ್ಗದರ್ಶನ ನೀಡಿದ ಮೌಲ್ಯಗಳು ಮತ್ತು ಸಂಸ್ಕೃತಿಗೆ ಆಸ್ಟ್ರೋನೊಮರ್ ಸಂಸ್ಥೆ ಬದ್ಧವಾಗಿದೆ. ನಮ್ಮ ಅಧಿಕಾರಿಯ ನಡವಳಿಕೆ ಮತ್ತು ಹೊಣೆಗಾರಿಕೆ ಎರಡರಲ್ಲೂ ಮಾನದಂಡವನ್ನು ಹೊಂದಿಸುವ ನಿರೀಕ್ಷೆಯಿದೆ. ಇತ್ತೀಚೆಗೆ, ಆ ಮಾನದಂಡವನ್ನು ಪೂರೈಸಲಾಗಿಲ್ಲ" ಎಂದು ಕಂಪನಿಯು ಲಿಂಕ್ಡ್‌ಇನ್‌ನಲ್ಲಿನ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.
ಅಂತೆಯೇ ಆಂಡಿ ಬೈರನ್ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದ್ದು, ಅವರ ಸ್ಥಾನಕ್ಕೆ ಸಹ-ಸಂಸ್ಥಾಪಕ ಮತ್ತು ಮುಖ್ಯ ಉತ್ಪನ್ನ ಅಧಿಕಾರಿ ಪೀಟ್ ಡಿಜಾಯ್ (Pete DeJoy) ಅವರನ್ನು ಮಧ್ಯಂತರ ಸಿಇಒ ಆಗಿ ಸೇವೆ ಸಲ್ಲಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತವಾಗಿ ಹೆಚ್ಚಿನ ವಿವರಗಳನ್ನು ನಾವು ಹಂಚಿಕೊಳ್ಳುತ್ತೇವೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಜುಲೈ 16, 2025 ರಂದು ಕೋಲ್ಡ್‌ಪ್ಲೇ ಸಂಗೀತ ಕಚೇರಿಯ ಸಂದರ್ಭದಲ್ಲಿ ಬೋಸ್ಟನ್‌ನ ಮ್ಯಾಸಚೂಸೆಟ್ಸ್‌ನ ಫಾಕ್ಸ್‌ಬರೋದಲ್ಲಿರುವ ಜಿಲೆಟ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಸ್ ಕ್ಯಾಮ್‌ನಲ್ಲಿ ಬೈರನ್ ಮತ್ತು ಕ್ಯಾಬಟ್ ಬಿಗಿದಪ್ಪಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಆ ಮೂಲಕ ಅವರಿಬ್ಬರ ಸಂಬಂಧ ಬಟಾ ಬಯಲಾಗಿತ್ತು.
ಕೋಲ್ಡ್‌ಪ್ಲೇ ಸಂಗೀತ ಕಚೇರಿಯ 14-ಸೆಕೆಂಡ್ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅಂತೆಯೇ ಈ ಬೆಳವಣಿಗೆ ಬೆನ್ನಲ್ಲೇ ಬೈರನ್ ಅವರ ಪತ್ನಿ ತಮ್ಮ ಹೆಸರಲ್ಲಿದ್ದ ಸರ್ ನೇಮ್ ಅನ್ನು ತೆಗೆದಿದ್ದು ಮಾತ್ರವಲ್ಲದೇ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
Advertisement