
ಮಾಸ್ಕೋ: ಉಕ್ರೇನ್ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದ ರಷ್ಯಾ ಮೇಲೆ ಉಕ್ರೇನ್ ತಿರುಗಿ ಬಿದ್ದಿದ್ದು, ಸೈಬಿರಿಯಾದಲ್ಲಿರುವ ರಷ್ಯಾ Airbaseಗಳ ಮೇಲೆ ಡ್ರೋನ್ ದಾಳಿ ಮಾಡಿ 40ಕ್ಕೂ ಯುದ್ಥ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಹೇಳಲಾಗಿದೆ.
ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ಯುದ್ಧ ಮತ್ತೆ ತಾರಕಕ್ಕೇರಿದ್ದು, ಯುದ್ಧದಲ್ಲಿ ಇದೇ ಮೊದಲ ಬಾರಿಗೆ ಅತಿ ದೊಡ್ಡ ಡ್ರೋನ್ ದಾಳಿ ನಡೆದಿದೆ.
ರಷ್ಯಾದ ಸೈಬೀರಿಯಾದಲ್ಲಿರುವ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಡ್ರೋನ್ ಮೂಲಕ ಅತಿ ದೊಡ್ಡ ದಾಳಿ ಮಾಡಿರುವ ಉಕ್ರೇನ್, ರಷ್ಯಾದ 40 ಕ್ಕೂ ಅಧಿಕ ಯುದ್ಧ ವಿಮಾನಗಳನ್ನು ನಾಶ ಮಾಡಿದೆ. ದಾಳಿಯಲ್ಲಿ ನಾಶವಾದ ವಿಮಾನಗಳಲ್ಲಿ ರಷ್ಯಾದ ಪ್ರಮುಖ ಫೈಟರ್ ಜೆಟ್ ಗಳಾದ Tu-95 ಮತ್ತು Tu-22M3 ಬಾಂಬರ್‌ಗಳು ಮತ್ತು ಕನಿಷ್ಠ ಒಂದು A-50 ಸೇರಿವೆ ಎಂದು ಮೂಲಗಳು ತಿಳಿಸಿವೆ.
ಉಕ್ರೇನ್ ಪ್ರಮುಖವಾಗಿ ರಷ್ಯಾದ ಫ್ರಂಟಲೈನ್ ಬಾಂಬರ್ ಯುದ್ಧ ವಿಮಾನಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿ ಮಾಡಿದೆ. ಈ ದಾಳಿ ಬಳಿಕ ಬೆಲಾಯಾ ವಾಯುನೆಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಉಕ್ರೇನ್ ರಷ್ಯಾದ ಸೈಬಿರಿಯಾ ಮಾತ್ರವಲ್ಲದೇ
ರಷ್ಯಾದ ಇರ್ಕುಟ್ಸ್ಕ್ ಪ್ರದೇಶದ ಮಿಲಿಟರಿ ಘಟಕದ ಮೇಲೂ ಡ್ರೋನ್ ದಾಳಿ ಮಾಡಿದ್ದು, ಈ ಕುರಿತ ವೀಡಿಯೊವನ್ನು ಸಹ ರಷ್ಯಾ ಅಧಿಕಾರಿಗಳು ಹಂಚಿಕೊಂಡಿದ್ದಾರೆ.
ಮೂಲಗಳ ಪ್ರಕಾರ ಉಕ್ರೇನ್ ಭಾನುವಾರ ಪ್ರಮುಖ ಡ್ರೋನ್ ದಾಳಿ ನಡೆಸಿ 40 ಕ್ಕೂ ಹೆಚ್ಚು ರಷ್ಯಾದ ಸೇನಾ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್‌ನ ದೇಶೀಯ ಭದ್ರತಾ ಸಂಸ್ಥೆ, ಸೆಕ್ಯುರಿಟಿ ಸರ್ವಿಸ್ ಆಫ್ ಉಕ್ರೇನ್ (SBU) ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉಕ್ರೇನ್ ದಾಳಿಯನ್ನು ದೃಢಪಡಿಸಿರುವ ರಷ್ಯಾದ ಇರ್ಕುಟ್ಸ್ಕ್ ಪ್ರಾಂತ್ಯದ ಗವರ್ನರ್, ಉಕ್ರೇನ್ ಸೇನೆಯು ರಿಮೋಟ್-ಪೈಲಟ್ ವಿಮಾನದ ಶ್ರೀದ್ನಿ ಗ್ರಾಮದಲ್ಲಿರುವ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದೆ.
ಇದು ಸೈಬೀರಿಯಾದಲ್ಲಿ ನಡೆದ ಮೊದಲ ದಾಳಿಯಾಗಿದೆ ಎಂದಿದ್ದಾರೆ. ಇನ್ನೊಂದೆಡೆ ರಷ್ಯಾದ ಸರ್ಕಾರಿ ಮಾಧ್ಯಮ ಕೂಡ ದಾಳಿಯನ್ನು ಖಾತ್ರಿ ಪಡಿಸಿದ್ದು, ಅದರ ವಿಡಿಯೋ ಹಂಚಿಕೊಂಡಿದ್ದಾರೆ.
ಇನ್ನೊಂದೆಡೆ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿಯೇ ನಡೆದಿರುವ ಈ ದಾಳಿಯು ಶಾಂತಿ ಮಾತುಕತೆಯ ಭವಿಷ್ಯದ ಕುರಿತು ಅನುಮಾನ ಮೂಡಿಸಿದೆ. ಏತನ್ಮಧ್ಯೆ ರಷ್ಯಾದ ಅಪಾರ ಕ್ಷಿಪಣಿಗಳ ಶಸ್ತ್ರಾಗಾರಗಳನ್ನು ಹೊಂದಿರದ ಉಕ್ರೇನ್, ಬದಲಾಗಿ ದಾಳಿ ಡ್ರೋನ್‌ಗಳ ದೊಡ್ಡ ಪಡೆಯನ್ನೇ ನಿರ್ಮಿಸಿ ಕೊಂಡಿದೆ, ಇದನ್ನು ಹಿಂದೆ ರಷ್ಯಾದ ಮಿಲಿಟರಿ ಮತ್ತು ತೈಲ ಸೌಲಭ್ಯಗಳ ಮೇಲೆ ದಾಳಿ ಮಾಡಲು ಬಳಸಿತ್ತು.
Advertisement