
ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವೆ ಸದ್ಯದಲ್ಲಿಯೇ ವ್ಯಾಪಾರ ಒಪ್ಪಂದವನ್ನು ನಿರೀಕ್ಷಿಸಬೇಕು ಎಂದು ಅಮೆರಿಕ ವಾಣಿಜ್ಯ ಇಲಾಖೆ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ,
ನಿನ್ನೆ ಸೋಮವಾರ ನಡೆದ ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂ (USISPF) ನಾಯಕತ್ವ ಶೃಂಗಸಭೆಯ ಎಂಟನೇ ಆವೃತ್ತಿಯಲ್ಲಿ ಅವರು ಮಾತನಾಡುತ್ತಿದ್ದರು.
ಸದ್ಯದಲ್ಲಿಯೇ ಅಮೆರಿಕ ಮತ್ತು ಭಾರತದ ನಡುವೆ ಒಪ್ಪಂದವನ್ನು ನೀವು ನಿರೀಕ್ಷಿಸಬೇಕು ಎಂದು ಲುಟ್ನಿಕ್ ತಮ್ಮ ಮುಖ್ಯ ಭಾಷಣದಲ್ಲಿ ಹೇಳಿದ್ದಾರೆ. ಎರಡೂ ದೇಶಗಳಿಗೆ ಸೂಕ್ತ ಸ್ಥಳವನ್ನು ಕಂಡುಕೊಂಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ ಆಶಾವಾದದಲ್ಲಿದ್ದೇವೆ ಎಂದರು.
ಭಾರತ ಮತ್ತು ಅಮೆರಿಕ ಒಟ್ಟಿಗೆ ಕೆಲಸ ಮಾಡಬಹುದಾದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿವೆ. ಈ ವಾರ ದೆಹಲಿಯಲ್ಲಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಮಹತ್ವದ ಮಾತುಕತೆ ನಡೆಯಲಿದ್ದು, ಇದಾದ ಬಳಿಕ ಉಭಯ ದೇಶಗಳು ಅಂತಿಮ ತೀರ್ಮಾನಕ್ಕೆ ಬರಲಿವೆ. ಅತಿ ಶೀಘ್ರದಲ್ಲೇ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಘೋಷಣೆಯಾಗಲಿದೆ ಎಂದು ಹೊವಾರ್ಡ್ ಲುಟ್ನಿಕ್ ಭರವಸೆ ವ್ಯಕ್ತಪಡಿಸಿದ್ದಾರೆ.
ಎರಡೂ ದೇಶಗಳು ಸರಿಯಾದ ಸಮಾಲೋಚಕರನ್ನು ನೇಮಿಸಿದಾಗ, ಚರ್ಚೆಗಳು ಗಮನಾರ್ಹವಾಗಿ ಹೆಚ್ಚು ಉತ್ಪಾದಕವಾಗುತ್ತವೆ, ಈ ನಿಟ್ಟಿನಲ್ಲಿ ಉತ್ತಮ ಮಟ್ಟಕ್ಕೆ ಹೋಗಲು ಸಿದ್ಧರಾಗಿದ್ದೇವೆ. ಎರಡೂ ದೇಶಗಳ ನಡುವಿನ ಹಿಂದಿನ ವ್ಯಾಪಾರ ಮಾತುಕತೆಗಳು ಸಾಮಾನ್ಯವಾಗಿ ಎರಡರಿಂದ ಮೂರು ವರ್ಷಗಳ ಕಾಲ ನಡೆಯುತ್ತಿದ್ದವು, ಆದರೆ ಪ್ರಸ್ತುತ ಪ್ರಯತ್ನವು ಕೇವಲ ಕೆಲವು ತಿಂಗಳುಗಳಲ್ಲಿ ಒಪ್ಪಂದವನ್ನು ತಲುಪುವ ಗುರಿಯನ್ನು ಹೊಂದಿದೆ. ಭಾರತವನ್ನು ಬಹುವಾಗಿ ಪ್ರೀತಿಸುವ ಡೊನಾಲ್ಡ್ ಟ್ರಂಪ್, ಎರಡೂ ದೇಶಗಳಿಗೆ ಅನುಕೂಲವಾಗುವಂತಹ ವ್ಯಾಪಾರ ಒಪ್ಪಂದನ್ನು ಜಾರಿಗ ತರಲಿದ್ದಾರೆ ಎಂದರು.
ಭಾರತ ಹೊಂದಿರುವ ಹೆಚ್ಚಿನ ಸುಂಕಗಳನ್ನು ಗಮನಿಸಿದ ಲುಟ್ನಿಕ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದನ್ನು ತಕ್ಷಣವೇ ಧ್ವನಿಗೂಡಿಸಲು ಸಿದ್ಧರಿದ್ದಾರೆ ಎಂದು ಹೇಳಿದರು.
ಅಮೆರಿಕವು ಭಾರತದಲ್ಲಿ ಹೆಚ್ಚಿನ ಮಾರುಕಟ್ಟೆ ಪ್ರವೇಶ ಮತ್ತು ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ, ಅದಕ್ಕೆ ಭಾರತವು ಪ್ರತಿಯಾಗಿ ಅಮೆರಿಕಾ ಮಾರುಕಟ್ಟೆಗೆ ಆದ್ಯತೆಯ ಪ್ರವೇಶವನ್ನು ಹುಡುಕುತ್ತಿದೆ ಎಂದರು.
Advertisement