
ಬ್ರಿಡ್ಜ್‌ವಾಟರ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಎಲೋನ್ ಮಸ್ಕ್ ನಡುವಿನ ಭಿನ್ನಮತ ಬಹಿರಂಗವಾಗಿ ವ್ಯಕ್ತವಾಗುತ್ತಿರುವುದು ಹೊಸ ವಿಷಯವಲ್ಲ. ಎಲೋನ್ ಮಸ್ಕ್ ಜೊತೆಗಿನ ವಾಕ್ಸಮರದಿಂದ ಟ್ರಂಪ್ ಹಿಂದೆ ಸರಿಯುವಂತೆ ಕಾಣುತ್ತಿಲ್ಲ.
ನಿಮ್ಮ ಜೊತೆ ಸಂಬಂಧ ಸರಿಪಡಿಸುವ ಬಯಕೆಯನ್ನು ಹೊಂದಿಲ್ಲ. ಮುಂಬರುವ ಚುನಾವಣೆಗಳಲ್ಲಿ ಡೆಮೋಕ್ರಾಟ್‌ಗಳಿಗೆ ಸಹಾಯ ಮಾಡಲು ಪ್ರಯತ್ನಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಲೋನ್ ಮಸ್ಕ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಎನ್‌ಬಿಸಿಯ ಕ್ರಿಸ್ಟನ್ ವೆಲ್ಕರ್‌ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಮಸ್ಕ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ. ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಮೆಗಾ-ಬಿಲಿಯನೇರ್ ಸಿಇಒ ಆಗಿರುವ ಎಲೋನ್ ಮಸ್ಕ್ ಜೊತೆಗಿನ ಸಂಬಂಧ ಮುಗಿದ ಅಧ್ಯಾಯವೇ ಎಂದು ಕೇಳಿದಾಗ ಹೌದು, ನಾನು ಹಾಗೆಯೇ ಭಾವಿಸುತ್ತೇನೆ ಎಂದಿದ್ದಾರೆ.
ನಾನು ಬೇರೆ ಕೆಲಸಗಳಲ್ಲಿ ನಿರತನಾಗಿದ್ದೇನೆ. ನಿಮಗೆಲ್ಲಾ ತಿಳಿದಿರುವಂತೆ ನಾನು ಭಾರಿ ಬಹುಮತದಲ್ಲಿ ಚುನಾವಣೆಯನ್ನು ಗೆದ್ದಿದ್ದೇನೆ. ನನ್ನ ಆಡಳಿತದಲ್ಲಿ ನಾನು ಎಲೋನ್ ಮಸ್ಕ್ ಗೆ ಸಾಕಷ್ಟು ಸ್ವಾತಂತ್ರ್ಯ ನೀಡಿದ್ದೆ. ನನ್ನಿಂದಾಗಿ ಅವರ ಜೀವನ ಉಳಿದಿದೆ, ಇನ್ನು ಅವರ ಜೊತೆ ಮಾತನಾಡುವ ಯಾವುದೇ ಆಸೆಯಿಲ್ಲ ಎಂದಿದ್ದಾರೆ.
2026 ರ ಮಧ್ಯಂತರ ಚುನಾವಣೆಯಲ್ಲಿ ಎಲೋನ್ ಮಸ್ಕ್ ಡೆಮಾಕ್ರಟಿಕ್ ಶಾಸಕರು ಮತ್ತು ಅಭ್ಯರ್ಥಿಗಳನ್ನು ಬೆಂಬಲಿಸಬಹುದು ಎಂಬ ವದಂತಿಯ ನಡುವೆ ಅಧ್ಯಕ್ಷ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.
"ಅವರು ಹಾಗೆ ಮಾಡಿದರೆ, ಅದರ ಪರಿಣಾಮಗಳನ್ನು ಅವರು ಭರಿಸಬೇಕಾಗುತ್ತದೆ" ಎಂದು ಟ್ರಂಪ್ NBC ಗೆ ತಿಳಿಸಿದರು, ಆದರೆ ಆ ಪರಿಣಾಮಗಳು ಏನೆಂದು ಹೇಳಲು ಅವರು ನಿರಾಕರಿಸಿದರು. ಮಸ್ಕ್ ಅವರ ವ್ಯವಹಾರಗಳು ಅನೇಕ ಲಾಭದಾಯಕ ಫೆಡರಲ್ ಒಪ್ಪಂದಗಳನ್ನು ಹೊಂದಿವೆ.
Advertisement