
ಜೆರುಸೆಲೆಂ: ಇರಾನ್ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದ ನಂತರ ವಿಶ್ವದಾದ್ಯಂತ ಇರುವ ತನ್ನ ಎಲ್ಲಾ ರಾಯಭಾರ ಕಚೇರಿಗಳನ್ನು ಇಸ್ರೇಲ್ ಮುಚ್ಚುತ್ತಿದೆ.
ಜಗತ್ತಿನ ವಿವಿಧ ರಾಷ್ಟ್ರಗಳು ತನ್ನ ನಾಗರಿಕರು ಜಾಗರೂಕರಾಗಿರಬೇಕು, ಯಹೂದಿ ಅಥವಾ ಇಸ್ರೇಲ್ ನ ಯಾವುದೇ ಲಾಂಛವನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬಾರದು ಎಂದು ರಾಯಬಾರ ಕಚೇರಿಯ ವೆಬ್ ಸೈಟ್ ಗಳಲ್ಲಿ ಶುಕ್ರವಾರ ಹೇಳಲಾಗಿದೆ.
ಇಸ್ರೇಲ್ ರಾಯಭಾರಿ ಕಚೇರಿಯ ಯಾವುದೇ ಸೇವೆಗಳು ಇರುವುದಿಲ್ಲ. ಯಾವುದೇ ದಾಳಿ ಎದುರಾದರೂ ನಾಗರಿಕರು ಸ್ಥಳೀಯ ಭದ್ರತಾ ಸಿಬ್ಬಂದಿಗಳೊಂದಿಗೆ ಸಹಕರಿಸುವಂತೆ ಎಚ್ಚರಿಕೆಯ ಸಂದೇಶದಲ್ಲಿ ತಿಳಿಸಲಾಗಿದೆ.
ರಾಯಭಾರ ಕಚೇರಿ ಎಷ್ಟು ದಿನಗಳ ಕಾಲ ಮುಚ್ಚಿರಲಿದೆ ಎಂಬ ಯಾವುದೇ ಮಾಹಿತಿಯನ್ನು ಇಸ್ರೇಲ್ ನೀಡಿಲ್ಲ. ಬರ್ಲಿನ್ ನ ರಾಯಭಾರ ಕಚೇರಿಯ ಸಿಬ್ಬಂದಿಯೊಬ್ಬರು ಕರೆ ಸ್ವೀಕರಿಸಿದರಾದರೂ ಅವರು ಹೆಚ್ಚಿನ ಮಾಹಿತಿ ನೀಡಲಿಲ್ಲ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಇಸ್ರೇಲಿ ರಾಯಭಾರ ಕಚೇರಿಗಳನ್ನು ಮುಚ್ಚಲಾಗುವುದು ಮತ್ತು ರಾಯಭಾರ ಕಚೇರಿ ಸೇವೆಗಳು ಇರುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜರ್ಮನಿ ಚಾನ್ಸಲರ್ ಫ್ರೆಡ್ರಿಕ್ ಮರ್ಜ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ತನ್ನ ದೇಶದಲ್ಲಿರುವ ಯಹೂದಿ ಮತ್ತು ಇಸ್ರೇಲ್ ತಾಣಗಳಿಗೆ ಹೆಚ್ಚಿನ ಭದ್ರತೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇರಾನ್ ನ ಅಣುಶಕ್ತಿ ಕೇಂದ್ರಗಳು ಮತ್ತು ಕ್ಷೀಪಣಿ ಕಾರ್ಖಾನೆ ಮೇಲೆ ದಾಳಿ ನಡೆಸಲಾಗಿದೆ. ಅಣು ಬಾಂಬ್ ಉತ್ಪಾದಿಸಲು ಮುಂದಾಗಿರುವ ಇರಾನ್ ಯತ್ನವನ್ನು ತಡೆಯಲು ಈ ಸೇನಾ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಇಸ್ರೇಲ್ ಹೇಳಿದೆ.
ಅಮೆರಿಕದ ಮಾತುಕತೆಗೆ ಸೊಪ್ಪ ಹಾಕದ ಇರಾನ್ ದಾಳಿಯನ್ನು ತಾನೇ ಆಹ್ವಾನಿಸಿಕೊಂಡಿದೆ. ಮುಂದಿನ ದಾಳಿ ಮತ್ತಷ್ಟು ಘೋರವಾಗಿರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
Advertisement