
ಟೆಲ್ ಅವಿವ್: ಇರಾನ್‌ನ ದಕ್ಷಿಣ ಬಂದರು ನಗರವಾದ ಕಂಗಾನ್‌ನಲ್ಲಿರುವ ಸೌತ್ ಪಾರ್ಸ್ ಸಂಸ್ಕರಣಾ ಘಟಕದ ಮೇಲೆ ಇಸ್ರೇಲಿ ಡ್ರೋನ್ ದಾಳಿ ನಡೆಸಿದ ನಂತರ ಶನಿವಾರ "ಬೃಹತ್ ಸ್ಫೋಟ" ಸಂಭವಿಸಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇದು ಇರಾನ್‌ನ ತೈಲ ಮತ್ತು ನೈಸರ್ಗಿಕ ಅನಿಲ ಉದ್ಯಮದ ಮೇಲೆ ಇಸ್ರೇಲಿ ನಡೆಸಿದ ಮೊದಲ ದಾಳಿಯಾಗಿದೆ.
"ಒಂದು ಗಂಟೆಯ ಹಿಂದೆ, ಸೌತ್ ಪಾರ್ಸ್ ಹಂತ 14 ಸಂಸ್ಕರಣಾಗಾರಗಳಲ್ಲಿ ಒಂದಕ್ಕೆ ಇಸ್ರೇಲ್ ಡ್ರೋನ್ ದಾಳಿ ನಡೆಸಿದೆ. ಇದರಿಂದಾಗಿ ಸಂಸ್ಕರಣಾಗಾರದಲ್ಲಿ ಭಾರಿ ಸ್ಫೋಟ ಮತ್ತು ಬೆಂಕಿ ಕಂಡುಬಂದಿತು ಎಂದು ತಸ್ನಿಮ್ ಸುದ್ದಿ ಸಂಸ್ಥೆ ಹೇಳಿದರೆ, ಅಗ್ನಿಶಾಮಕ ಸಿಬ್ಬಂದಿ ದಾಳಿಯಿಂದ ಸ್ಫೋಟಗೊಂಡ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಫಾರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಪರ್ಷಿಯನ್ ಕೊಲ್ಲಿಯಲ್ಲಿ ಹರಡಿಕೊಂಡಿರುವ ಅನಿಲ ಕ್ಷೇತ್ರವನ್ನು ಇರಾನ್ ಕತಾರ್‌ನೊಂದಿಗೆ ಹಂಚಿಕೊಳ್ಳುತ್ತದೆ.
ಇಸ್ಲಾಮಿಕ್ ಗಣರಾಜ್ಯದ ಮಿಲಿಟರಿ ಮತ್ತು ಪರಮಾಣು ಘಟಕಗಳನ್ನು ಗುರಿಯಾಗಿಸಿಕೊಂಡು ಇರಾನ್‌ನಾದ್ಯಂತ ಹಲವಾರು ಸ್ಥಳಗಳಲ್ಲಿ ಇಸ್ರೇಲ್ ಸೇನೆಯು ಶನಿವಾರ ಮತ್ತೆ ದಾಳಿ ನಡೆಸಿದೆ. ಇರಾನ್‌ನಲ್ಲಿ ಹಲವು ಕಡೆಗಳಲ್ಲಿ ದಾಳಿ ಪ್ರಾರಂಭಿಸಿದ್ದೇವೆ ಎಂದು ಮಿಲಿಟರಿ ವಕ್ತಾರ ಬ್ರಿಗೇಡಿಯರ್ ಜನರಲ್ ಎಫಿ ಡೆಫ್ರಿನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇರಾನ್ ಕ್ಷಿಪಣಿಗಳನ್ನು ಹಾರಿಸುವುದನ್ನು ಮುಂದುವರೆಸಿದರೆ "ಟೆಹ್ರಾನ್ ಸುಟ್ಟುಹೋಗುತ್ತದೆ" ಎಂದು ಇಸ್ರೇಲ್ ರಕ್ಷಣಾ ಸಚಿವರು ಎಚ್ಚರಿಸಿದ್ದಾರೆ. ಇರಾನ್‌ನಲ್ಲಿ ಅಯತೊಲ್ಲಾ ಅಲಿ ಖಮೇನಿ ಆಡಳಿತದ ಪ್ರತಿಯೊಂದು ಅಂಶಗಳನ್ನು ಗುರಿಯನ್ನಾಗಿಸಲಾಗುವುದು ಎಂದು ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಪ್ರತಿಜ್ಞೆ ಮಾಡಿದ್ದಾರೆ.
ಪ್ರತಿಯೊಂದು ಸ್ಥಳಕ್ಕೆ ನುಗ್ಗಿ ಹೊಡೆಯುತ್ತೇವೆ:
ಇರಾನ್ ಮಿಲಿಟರಿ ಮತ್ತು ಪರಮಾಣು ಘಟಕಗಳನ್ನು ಗುರಿಯಾಗಿಸಿಕೊಂಡ ಇಸ್ರೇಲ್‌ನ ವಾಯು ಕಾರ್ಯಾಚರಣೆಯ ಎರಡನೇ ದಿನದಂದು ವೀಡಿಯೊದಲ್ಲಿ ಮಾತನಾಡಿರುವ ನೇತನ್ಯಾಹು, ಅಯತೊಲ್ಲಾ ಆಡಳಿತದ ಪ್ರತಿಯೊಂದು ಸ್ಥಳಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದು ಹೇಳಿದ್ದಾರೆ.
ಶುಕ್ರವಾರದಿಂದ ಅವರ ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿದ್ದೇವೆ. ನಾವು ಟೆಹ್ರಾನ್‌ಗೆ ಮಾರ್ಗವನ್ನು ತೆರೆದಿದ್ದೇವೆ. ಶೀಘ್ರದಲ್ಲೇ ಟೆಹ್ರಾನ್ ಮೇಲೆ ಇಸ್ರೇಲಿ ವಿಮಾನಗಳು, ನಮ್ಮ ವಾಯುಪಡೆ, ಪೈಲಟ್ ಗಳನ್ನು ನೋಡುತ್ತೀರಿ ಎಂದು ನೆತನ್ಯಾಹು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಇಸ್ರೇಲ್ ದಾಳಿಯನ್ನು ಮುಂದುವರೆಸಿದರೆ "ಹೆಚ್ಚು ತೀವ್ರ ಮತ್ತು ಶಕ್ತಿಯುತವಾದ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
Advertisement