Israel-Iran war: ನೇರ ಪ್ರಸಾರದ ವೇಳೆ ಇರಾನ್ ಟಿವಿ ಚಾನೆಲ್ ಕಟ್ಟಡಕ್ಕೆ ಬಡಿದ ಇಸ್ರೇಲ್ ಕ್ಷಿಪಣಿ; ಕಾಲ್ಕಿತ್ತ ನ್ಯೂಸ್ ಆಂಕರ್! Video
ಟೆಹರಾನ್: ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ನೇರ ಪ್ರಸಾರ ಮಾಡುತ್ತಿದ್ದ ಇರಾನ್ ನ ಟಿವಿ ಚಾನೆಲ್ ನ ಕಾಂಪೌಂಡ್ ಗೆ ಇಸ್ರೇಲ್ ನ ಕ್ಷಿಪಣಿ ಬಡಿದಿದೆ. ಇದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಆ ಸಮಯದಲ್ಲಿ ಸುದ್ದಿಗಳನ್ನು ಓದುತ್ತಿದ್ದ ನ್ಯೂಸ್ ಆಂಕರ್ ಸಹಾರ್ ಇಮಾಮಿ, ನಡುಗುತ್ತಿದ್ದಂತೆ ಕಂಡುಬಂದ ಸ್ಟುಡಿಯೋದಲ್ಲಿನ ತನ್ನ ಸೀಟಿನಿಂದ ಥಟ್ಟನೆ ಏಳುವಂತೆ ಕಾಣಿಸುತ್ತದೆ. ತದನಂತರ ಆಕೆ ಅಲ್ಲಿಂದ ಪರಾರಿಯಾಗುವಾಗ "ಅಲ್ಲಾಹು ಅಕ್ಬರ್" ಘೋಷಣೆಗಳು ಪ್ರತಿಧ್ವನಿಸುತ್ತವೆ. ಈ ಇಡೀ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ಇರಾನ್ ರಾಜ್ಯದ ಟಿವಿ, ರೇಡಿಯೋ 'ಕಣ್ಮರೆಯಾಗಲಿದೆ': ಇಸ್ರೇಲ್ ರಕ್ಷಣಾ ಸಚಿವ
ಇರಾನ್ ಆಡಳಿತದ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಟ್ಟುಕೊಂಡ ಯೋಜಿತ ವಾಯುದಾಳಿಗೂ ಮುನ್ನ ಇಸ್ರೇಲ್ ಎಚ್ಚರಿಕೆ ನೀಡಿತ್ತು. ಟೆಹರಾನ್ ನ ಉತ್ತರ ಜಿಲ್ಲೆ 3 ರ ಸ್ಥಳಾಂತರವನ್ನು ದೃಢಪಡಿಸಿತ್ತು. ಇದು ಟೆಹರಾನ್ ನ ಉನ್ನತ, ಕಾರ್ಯತಂತ್ರದ ಭಾಗವಾಗಿದೆ. ಇರಾನ್ ನ ಪ್ರಸಾರ ಸಂಸ್ಥೆ IRIB, ನಾಲ್ಕು ಆಸ್ಪತ್ರೆಗಳು, ದೊಡ್ಡ ಪೊಲೀಸ್ ಕಟ್ಟಡಗಳು, ಕತಾರ್, ಒಮನ್ ಮತ್ತು ಕುವೈತ್ ನ ರಾಯಭಾರ ಕಚೇರಿಗಳು ಮತ್ತು ವಿಶ್ವಸಂಸ್ಥೆ ಕಚೇರಿಗಳು ಇಲ್ಲಿವೆ.
ಟೆಹರಾನ್ ನಲ್ಲಿ ಈಗಾಗಲೇ ಸ್ಥಳಾಂತರ ನಡೆಯುತ್ತಿದ್ದು, ಇರಾನ್ ಪ್ರಚಾರ ಮತ್ತು ಪ್ರಚೋದನೆಯ ಮೆಗಾಫೋನ್ ಕಣ್ಮರೆಯಾಗಲಿದೆ ಎಂದು ಇಸ್ರೇಲಿ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದರು.
ಸಂದಾನಕ್ಕೆ ಮುಂದಾದ ಇರಾನ್:
ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಕುರಿತು ಉದ್ವಿಗ್ನತೆ ತಗ್ಗಿಸಲು ಮತ್ತು ಮಾತುಕತೆಗಳನ್ನು ಪುನರಾರಂಭಿಸಲು ಪ್ರಯತ್ನಿಸುತ್ತಿದೆ ಎಂದು ಸೋಮವಾರ ವಾಲ್ ಸ್ಟ್ರೀಟ್ ಜರ್ನಲ್ ಪ್ರಾದೇಶಿಕ ಮತ್ತು ಪಶ್ಚಿಮ ದ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ. ಇರಾನ್ ಅರಬ್ ಮಧ್ಯವರ್ತಿಗಳ ಮೂಲಕ ಇಸ್ರೇಲ್ ಮತ್ತು ಅಮೆರಿಕಕ್ಕೆ ಮಾತುಕತೆ ಸಂದೇಶಗಳನ್ನು ರವಾನಿಸಿದೆ. ಸಂಧಾನದ ಮಾತುಕತೆಗೆ ಇಚ್ಚಿಸಿದೆ ಎಂದು ವರದಿ ಹೇಳಿದೆ.
ಇಸ್ರೇಲಿ ದಾಳಿ, ನಿವಾಸಿಗಳ ಪಲಾಯನ, ಟೆಹರಾನ್ ನಲ್ಲಿ ಭಾರಿ ಟ್ರಾಫಿಕ್ ಜಾಮ್: ತೀವ್ರವಾದ ಇಸ್ರೇಲಿ ವೈಮಾನಿಕ ದಾಳಿಯ ನಡುವೆ ಸಾವಿರಾರು ನಿವಾಸಿಗಳು ಟೆಹರಾನ್ ನಿಂದ ಪಲಾಯನ ಮಾಡುತ್ತಿದ್ದಾರೆ. ಪ್ರಮುಖ ನಿರ್ಗಮನ ಮಾರ್ಗಗಳು ವಿಶೇಷವಾಗಿ ಕ್ಯಾಸ್ಪಿಯನ್ ಸಮುದ್ರಕ್ಕೆ ತೆರಳುವ ಹೆದ್ದಾರಿ 49 ರಲ್ಲಿ ಭಾರಿ ಟ್ರಾಫಿಕ್ ಜಾಮ್ ಕಂಡುಬಂದಿದೆ.
ಟೆಹರಾನ್ ಬಳಿ ಕ್ಷಿಪಣಿ ತುಂಬಿದ ಟ್ರಕ್‌ಗಳ ಮೇಲೆ ದಾಳಿ: ಇಸ್ರೇಲ್ ರಕ್ಷಣಾ ಪಡೆ
ಪಶ್ಚಿಮ ಇರಾನ್ ನಿಂದ ಟೆಹರಾನ್ ಕಡೆಗೆ ಸಾಗುತ್ತಿದ್ದ ಶಸ್ತ್ರಾಸ್ತ್ರ ತುಂಬಿದ ಟ್ರಕ್‌ಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (IDF)ಸೋಮವಾರ ಹೇಳಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇರಾನ್ ಮಿಲಿಟರಿ ಮೂಲಸೌಕರ್ಯ ನಾಶಪಡಿಸುವ ನಿಟ್ಟಿನಲ್ಲಿ ಈ ದಾಳಿ ನಡೆಸಿರುವುದಾಗಿ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ