
ಇಸ್ರೇಲ್ ಮತ್ತು ಇರಾನ್ (Iran Israel War) ನಡುವೆ ಸಂಘರ್ಷ ತೀವ್ರಗೊಳ್ಳುತ್ತಿದೆ. ಉಭಯ ದೇಶಗಳು ಪರಸ್ಪರ ಬಾಂಬ್ ದಾಳಿಗಳನ್ನು ಮಾಡಿಕೊಳ್ಳುತ್ತಿದ್ದು ಭಾರೀ ಸಂಖ್ಯೆಯಲ್ಲಿ ಸಾವು ನೋವು ವರದಿಯಾಗುತ್ತಿವೆ. ಇನ್ನು ಇಸ್ರೇಲ್ ಈ ಬಾರಿ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು ಇರಾನ್ ನ ನ್ಯೂಕ್ಲಿಯರ್ ಕೇಂದ್ರ, ಕ್ಷಿಪಣಿ ವ್ಯವಸ್ಥೆಗಳು, ಸೇನಾ ಮುಖ್ಯಸ್ಥರು ಮತ್ತು ಅನಿಲ ದಾಸ್ತಾನುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಇದು ಇರಾನ್ ಗೆ ತೀವ್ರ ಪ್ರಮಾಣದಲ್ಲಿ ಹಾನಿಯುಂಟು ಮಾಡಿದೆ.
ಇದರ ಬೆನ್ನಲ್ಲೇ ಇರಾನ್ ರೆವಲ್ಯೂಷನರಿ ಗಾರ್ಡ್ಸ್ (IRGC)ನ ಹಿರಿಯ ಕಮಾಂಡರ್ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯ ಜನರಲ್ ಮೊಹ್ಸಿನ್ ರಾಜೈ (Mohsen Rezaee), ಇರಾನ್ ಮೇಲೆ ಇಸ್ರೇಲ್ ಪರಮಾಣು ಬಾಂಬ್‌ಗಳನ್ನು (Nuclear Bomb) ಬಳಸಿದರೆ, ಪಾಕಿಸ್ತಾನವು ಇಸ್ರೇಲ್‌ನ ಮೇಲೆ ಪರಮಾಣು ಬಾಂಬ್‌ಗಳ ಮೂಲಕ ದಾಳಿ ಮಾಡುತ್ತದೆ ಎಂದು ಪಾಕಿಸ್ತಾನ ನಮಗೆ ತಿಳಿಸಿದೆ ಎಂದು ಹೇಳಿದ್ದಾರೆ.
2025ರ ಜೂನ್ 13ರಂದು 'ಆಪರೇಷನ್ ರೈಸಿಂಗ್ ಲಯನ್' ಅಡಿಯಲ್ಲಿ ಇಸ್ರೇಲ್ ಇರಾನ್‌ನ ಪರಮಾಣು, ಮಿಲಿಟರಿ ಮತ್ತು ತೈಲ-ಅನಿಲ ಸ್ಥಾಪನೆಗಳ ಮೇಲೆ ಬೃಹತ್ ದಾಳಿಗಳನ್ನು ನಡೆಸಿದ ಸಮಯದಲ್ಲಿ ಈ ಹೇಳಿಕೆ ಬಂದಿದೆ. ಈ ದಾಳಿಗಳಲ್ಲಿ ನಾಲ್ಕು ಹಿರಿಯ ಇರಾನಿನ ಮಿಲಿಟರಿ ಕಮಾಂಡರ್‌ಗಳು, ಆರು ಪರಮಾಣು ವಿಜ್ಞಾನಿಗಳು ಮತ್ತು 78 ನಾಗರಿಕರು ಸಾವನ್ನಪ್ಪಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಇಸ್ರೇಲ್ ಮೇಲೆ 100ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿತು. ಇದು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತು. ಇರಾನ್‌ನ ಹೇಳಿಕೆಯು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ. ಏಕೆಂದರೆ ಅದು ಪಾಕಿಸ್ತಾನದಂತಹ ಪರಮಾಣು-ಸಶಸ್ತ್ರ ದೇಶವನ್ನು ಈ ಸಂಘರ್ಷದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
2025ರ ಜೂನ್ 16ರಂದು, ಇರಾನ್‌ನ ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ಇಸ್ರೇಲ್ ಇರಾನ್ ಮೇಲೆ ಪರಮಾಣು ಬಾಂಬ್ ಬಳಸಿದರೆ, ಪಾಕಿಸ್ತಾನವು ಇಸ್ರೇಲ್ ಮೇಲೆ ಪರಮಾಣು ದಾಳಿಯನ್ನು ನಡೆಸುತ್ತದೆ ಎಂದು ಹೇಳಿದ್ದರು. ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಈ ಹೇಳಿಕೆ ಬಂದಿದ್ದು, ಎರಡೂ ದೇಶಗಳು ಪರಸ್ಪರ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿವೆ. ಆದಾಗ್ಯೂ, ಪಾಕಿಸ್ತಾನ ಈ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿತು. ಅಂತಹ ಯಾವುದೇ ಕೆಲಸಕ್ಕೆ ಮುಂದಾಗಲ್ಲ ಎಂದು ಹೇಳಿದೆ.
ಪಾಕಿಸ್ತಾನ (Pakistan) ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಇರಾನ್‌ನ ಹೇಳಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಇಸ್ಲಾಮಾಬಾದ್ ಇಸ್ರೇಲ್ ವಿರುದ್ಧ ಪರಮಾಣು ದಾಳಿಯ ಬಗ್ಗೆ ಮಾತನಾಡಿಲ್ಲ ಎಂದು ಅವರು ಹೇಳಿದರು. ಪಾಕಿಸ್ತಾನವು ಅಂತಹ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿತು. ಇಸ್ರೇಲ್‌ನ ಕ್ರಮಗಳನ್ನು ಖಂಡಿಸಿರುವ ಪಾಕಿಸ್ತಾನವು ಇರಾನ್‌ಗೆ ಬೆಂಬಲ ವ್ಯಕ್ತಪಡಿಸಿದೆ.
Advertisement