
ಇಸ್ಲಾಮಾಬಾದ್: ದೀರ್ಘಾವಧಿಯ ಕಾರ್ಯತಂತ್ರದ ಒಮ್ಮುಖ ಮತ್ತು ಹಂಚಿಕೆಯ ಹಿತಾಸಕ್ತಿಗಳ ಆಧಾರದ ಮೇಲೆ ಪಾಕಿಸ್ತಾನದೊಂದಿಗೆ 'ಪರಸ್ಪರ ಪ್ರಯೋಜನಕಾರಿ' ವ್ಯಾಪಾರ ಪಾಲುದಾರಿಕೆಯನ್ನು ವೃದ್ಧಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ತೀವ್ರ ಆಸಕ್ತಿ' ವ್ಯಕ್ತಪಡಿಸಿದ್ದಾರೆ ಎಂದು ಪಾಕ್ ಸೇನೆಯ ಮಾಧ್ಯಮ ವಿಭಾಗ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ತಿಳಿಸಿದೆ.
ಟ್ರಂಪ್ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಸಭೆಯ ನಂತರ ಈ ಹೇಳಿಕೆ ಹೊರಬಿದ್ದಿದೆ. ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಜಂಟಿ ಭಯೋತ್ಪಾದನಾ ನಿಗ್ರಹ ಪ್ರಯತ್ನಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ಹೇಳಿದೆ. ಉನ್ನತ ಮಟ್ಟದ ಸಭೆಯ ವೇಳೆ, ವ್ಯಾಪಾರ, ಆರ್ಥಿಕ ಅಭಿವೃದ್ಧಿ, ಗಣಿಗಳು ಮತ್ತು ಖನಿಜಗಳು, ಕೃತಕ ಬುದ್ಧಿಮತ್ತೆ, ಇಂಧನ, ಕ್ರಿಪ್ಟೋಕರೆನ್ಸಿ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಸೇರಿದಂತೆ ಬಹು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವ ಮಾರ್ಗಗಳನ್ನು ಚರ್ಚಿಸಲಾಯಿತು ಎಂದು ISPR ಹೇಳಿದೆ.
ಡೊನಾಲ್ಡ್ ಟ್ರಂಪ್-ಮುನೀರ್ ಸಭೆಯನ್ನು "78 ವರ್ಷಗಳ ಸಂಬಂಧಗಳ ಇತಿಹಾಸದಲ್ಲಿ ಅತ್ಯಂತ ಪ್ರಮುಖ ತಿರುವು" ಎಂದು ಬಣ್ಣಿಸಿದ ಆಸಿಫ್, ಈ ಬೆಳವಣಿಗೆ ಚುನಾಯಿತ ಸರ್ಕಾರ ಮತ್ತು ಸೈನ್ಯವನ್ನು ಒಳಗೊಂಡ "ಪ್ರಸ್ತುತ ಹೈಬ್ರಿಡ್ ಆಡಳಿತ ಮಾದರಿ"ಯ ಯಶಸ್ಸು ಎಂದು ಹೇಳಿದರು.
ಇತ್ತೀಚಿನ ಪ್ರಾದೇಶಿಕ ಬಿಕ್ಕಟ್ಟಿನಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವೆ ಕದನ ವಿರಾಮವನ್ನು ಸುಗಮಗೊಳಿಸುವಲ್ಲಿ ಅಧ್ಯಕ್ಷ ಟ್ರಂಪ್ ಅವರ ರಚನಾತ್ಮಕ ಮತ್ತು ಫಲಿತಾಂಶ-ಆಧಾರಿತ ಪಾತ್ರಕ್ಕಾಗಿ ಪಾಕಿಸ್ತಾನ ಸರ್ಕಾರ ಮತ್ತು ಜನರ ಆಳವಾದ ಮೆಚ್ಚುಗೆಯನ್ನು ಪಾಕ್ ಸೇನಾ ಮುಖ್ಯಸ್ಥರು ವ್ಯಕ್ತಪಡಿಸಿದರು. ಟ್ರಂಪ್ ಅವರ ರಾಜನೀತಿ ಮತ್ತು ಜಾಗತಿಕ ಸಮುದಾಯ ಎದುರಿಸುತ್ತಿರುವ ಬಹುಮುಖಿ ಸವಾಲುಗಳನ್ನು ಗ್ರಹಿಸುವ ಮತ್ತು ಪರಿಹರಿಸುವ ಅವರ ಸಾಮರ್ಥ್ಯವನ್ನು ಮುನೀರ್ ಒಪ್ಪಿಕೊಂಡರು ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನಗಳನ್ನು ಟ್ರಂಪ್ ಶ್ಲಾಘಿಸಿದರು. ಎರಡೂ ದೇಶಗಳ ನಡುವಿನ ಬಲವಾದ ಭಯೋತ್ಪಾದನಾ ನಿಗ್ರಹ ಸಹಕಾರಕ್ಕೆ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದರು. ಭಯೋತ್ಪಾದನಾ ನಿಗ್ರಹ ಕ್ಷೇತ್ರದಲ್ಲಿ ನಿರಂತರ ಸಹಯೋಗಕ್ಕೆ ಎರಡೂ ಕಡೆಯವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು ಎಂದು ISPR ಹೇಳಿದೆ.
Advertisement