
ಟೆಹ್ರಾನ್: ಅಮೆರಿಕ ದಾಳಿ ನಡೆಸುವ ಮುನ್ನವೇ ಇರಾನ್ ತನ್ನ ಪರಮಾಣು ಘಟಕಗಳಲ್ಲಿನ ಎಲ್ಲ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದೆ ಎಂದು ಹೇಳಲಾಗುತ್ತಿದೆ.
ಅಣ್ವಸ್ತ್ರ ವಿಚಾರವಾಗಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಲ್ಲಿ ಅಮೆರಿಕ ಎಂಟ್ರಿ ಕೊಟ್ಟಿದ್ದು, ತನ್ನ ಬಿ2 ಸ್ಪಿರಿಟ್ ಬಾಂಬರ್ ಯುದ್ಧ ವಿಮಾನಗಳ ಮೂಲಕ ಇರಾನ್ ನ ಪರಮಾಣು ಘಟಕಗಳ ಮೇಲೆ ಬಾಂಬ್ ಗಳ ಸುರಿಮಳೆ ಸುರಿಸಿದೆ.
ಆದರೆ ಅಮೆರಿಕ ದಾಳಿಗೂ ಮುನ್ನವೇ ಸಂಭಾವ್ಯ ದಾಳಿಯನ್ನು ಊಹಿಸಿದ್ದ ಇರಾನ್ ತನ್ನ ಪರಮಾಣು ಘಟಕದಲ್ಲಿದ್ದ ಅಪಾರ ಪ್ರಮಾಣದ ಯುರೇನಿಯಂ ಮತ್ತು ಇತರೆ ಅಣ್ವಸ್ತ್ರ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ ಎಂದು ಹೇಳಲಾಗುತ್ತಿದೆ.
ಇರಾನ್ ನ ಪ್ರಮುಖ ಪರಮಾಣು ತಾಣಗಳನ್ನು "ಸಂಪೂರ್ಣವಾಗಿ ಮತ್ತು ಸಂಪೂರ್ಣವಾಗಿ ನಾಶಪಡಿಸಲಾಗಿದೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿತ್ತು. ಆದರೆ ಇರಾನ್ ದಾಳಿಯನ್ನು ನಿರೀಕ್ಷಿಸಿ, ಶೇ.60ರಷ್ಟು ಶುದ್ಧೀಕರಿಸಿದ ಸುಮಾರು 408 ಕಿಲೋಗ್ರಾಂ ಯುರೇನಿಯಂ ಅನ್ನು ಸ್ಥಳಾಂತರಿಸಿರಬಹುದು. ಇದರಿಂದಾಗಿ ಅದು ತನ್ನ ಪರಮಾಣು ಕಾರ್ಯಕ್ರಮದ ಅತ್ಯಂತ ಅಪಾಯಕಾರಿ ಅಂಶವನ್ನು ಸಂರಕ್ಷಿಸಲು ಅವಕಾಶ ಮಾಡಿಕೊಟ್ಟಿರಬಹುದು ಎಂದು ಹಲವಾರು ತಜ್ಞರು ಎಚ್ಚರಿಸಿದ್ದಾರೆ.
ಹೆಚ್ಚು ಸಮೃದ್ಧಗೊಳಿಸಿದ ಯುರೇನಿಯಂನ ಈ ದಾಸ್ತಾನು ಶಸ್ತ್ರಾಸ್ತ್ರ ದರ್ಜೆಯ ಮಟ್ಟಕ್ಕಿಂತ ಸ್ವಲ್ಪ ಕಡಿಮೆ ಎಂದು ಪರಿಗಣಿಸಲಾಗಿದೆ. ಇರಾನ್ ಅದನ್ನು ಶೇ.90% ಕ್ಕೆ ಮತ್ತಷ್ಟು ಪುಷ್ಟೀಕರಿಸಿದರೆ, ಅದು ಬಹು ಪರಮಾಣು ಬಾಂಬ್‌ಗಳನ್ನು ಉತ್ಪಾದಿಸಲು ಸಾಕಾಗುತ್ತದೆ ಎಂದು ತಜ್ಞರು ನಂಬುತ್ತಾರೆ.
ಹೆಸರು ಬಹಿರಂಗಪಡಿಸದ ಇರಾನ್ ಆಡಳಿತದ ಅಧಿಕಾರಿಯೊಬ್ಬರು ಈ ಕುರಿತು ಮಾತನಾಡಿ, 'ನಟಾಂಜ್, ಫೋರ್ಡೋ ಅಥವಾ ಇಸ್ಫಹಾನ್‌ನ ಬಾಂಬ್ ದಾಳಿಗೊಳಗಾದ ತಾಣಗಳಲ್ಲಿ ಪುಷ್ಟೀಕರಿಸಿದ ಯುರೇನಿಯಂ ಅನ್ನು ಸಂಗ್ರಹಿಸಲಾಗಿತ್ತು. ಆದರೆ ಸಂಭಾವ್ಯ ದಾಳಿ ಹಿನ್ನಲೆಯಲ್ಲಿ ಅವುಗಳನ್ನು ದೊಡ್ಡ ದೊಡ್ಡ ಟ್ರಕ್ ಗಳ ಮೂಲಕ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. "ಪುಷ್ಟೀಕರಿಸಿದ ಅಥವಾ ಶುದ್ಧೀಕರಿಸಿದ ಯುರೇನಿಯಂ ಅನ್ನು ಮುಟ್ಟಲಾಗಿಲ್ಲ" ಎಂದು ಹೇಳಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಅಮೆರಿಕ ದಾಳಿಗೂ ಮುನ್ನ ಇರಾನ್ ನ ಫೋರ್ಡೋ ಅಣು ಸ್ಥಾವರದಲ್ಲಿ ಸುಮಾರು 14 ದೊಡ್ಡ ಟ್ರಕ್ ಗಳು ಸಾಲಾಗಿ ನಿಂತಿರುವ ಸ್ಯಾಟಲೈಟ್ ಚಿತ್ರ ಇದೀಗ ವೈರಲ್ ಆಗುತ್ತಿದೆ.
ಅಂತೆಯೇ ಇದೇ ವಿಚಾರವಾಗಿ ಮಾತನಾಡಿದ್ದ ಇರಾನ್‌ನ ಹಿರಿಯ ಸಲಹೆಗಾರ ಅಲಿ ಶಮ್ಖಾನಿ, ಅಮೆರಿಕ ದಾಳಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದು, "ಪರಮಾಣು ತಾಣಗಳು ನಾಶವಾದರೂ, ಆಟ ಮುಗಿದಿಲ್ಲ. ಪುಷ್ಟೀಕರಿಸಿದ ವಸ್ತುಗಳು, ಸ್ಥಳೀಯ ಜ್ಞಾನ, ರಾಜಕೀಯ ಇಚ್ಛಾಶಕ್ತಿ ಉಳಿಯುತ್ತದೆ. ಮುಂದುವರಿದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಸಿದ್ಧಾಂತವು ಬದಲಾಗಬಹುದು ಎಂದು ಟ್ವೀಟ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪರಮಾಣು ಘಟಕ ನಾಶ, ಸಂಪೂರ್ಣ ನಾಶವಲ್ಲ
ಒಂದು ವೇಳೆ ಇರಾನ್ ನ ಈ ಮಾತುಗಳು ನಿಜವಾಗಿದ್ದರೆ, ಅಮೆರಿಕ ದಾಳಿಯು ಇರಾನ್‌ನ ಪರಮಾಣು ಸಾಮರ್ಥ್ಯವನ್ನು ಗಮನಾರ್ಹವಾಗಿ ಹಿಮ್ಮೆಟ್ಟಿಸದೆ ಭೌತಿಕ ಹಾನಿಯನ್ನುಂಟುಮಾಡಿರಬಹುದು ಎಂದು ಹೇಳಲಾಗಿದೆ.
ಅಂದಹಾಗೆ ಅಮೆರಿಕ ಸೇನೆ ತನ್ನ ಬಿ2 ಸ್ಪಿರಿಟ್ ಬಾಂಬರ್ ಯುದ್ಧ ವಿಮಾನಗಳ ಮೂಲಕ ಇರಾನ್ ನ ಫೋರ್ಡೋ ಮತ್ತು ನಟಾಂಜ್ ಮೇಲೆ 30,000 ಪೌಂಡ್‌ಗಳ "ಬಂಕರ್ ಬಸ್ಟರ್" ಬಾಂಬ್‌ಗಳನ್ನು ಸುರಿಸಿತ್ತು. ಅಂತೆಯೇ ಇಸ್ಫಹಾನ್ ಪರಮಾಣ ಸೌಲಭ್ಯದಲ್ಲೂ ಡಜನ್ಗಟ್ಟಲೆ ಟೊಮಾಹಾಕ್ ಕ್ರೂಸ್ ಕ್ಷಿಪಣಿಗಳಿಂದ ಹೊಡೆಯಾಲಾಗಿತ್ತು. ಈ ಕುರಿತ ಉಪಗ್ರಹ ಚಿತ್ರಗಳು ವ್ಯಾಪಕವಾದ ಮೇಲ್ಮೈ ಹಾನಿಯನ್ನು ತೋರಿಸುತ್ತಿವೆ ಎಂದು ವರದಿಯಾಗಿದೆ.
Advertisement